
ವಾಮಾಚಾರ ಮಾಡಿದ ಸ್ಥಳದಲ್ಲಿಯೇ ಜೀವಂತ ಕುರಿ ಬಿಟ್ಟು ಹೋದರು..!
ಚುನಾವಣಾ ರಾಜಕಾರಣದ ಶಂಕೆ ವ್ಯಕ್ತಪಡಿಸುತ್ತಿರುವ ಸ್ಥಳೀಯ ಗ್ರಾಮಸ್ಥರು!!
ಶಿವಮೊಗ್ಗ, ಎ. 13: ರಾಷ್ಟ್ರೀಯ ಹೆದ್ಧಾರಿ ಬದಿಯ ಆಲದ ಮರವೊಂದರ ಬಳಿ ವಾಮಾಚಾರ ನಡೆಸಿ, ಸದರಿ ಸ್ಥಳದಲ್ಲಿಯೇ ಜೀವಂತ ಕುರಿ ಬಿಟ್ಟು ಹೋದ ಘಟನೆ, ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಭೋವಿ ಕಾಲೋನಿ ಸಮೀಪ ನಡೆದಿದ್ದು ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ!
ತಡರಾತ್ರಿ ವೇಳೆ ವಾಮಾಚಾರ ನಡೆಸಲಾಗಿದೆ. ವಾಮಾಚಾರ ನಡೆಸಿದ ಸ್ಥಳದಲ್ಲಿ ಮಡಕೆಗಳು, ಅನ್ನ, ಬಿದಿರಿನ ಮರ ಹಾಗೂ ಪುಟ್ಟಿಗಳು, ಮೊಟ್ಟೆ, ಬಟ್ಟೆಗಳು, ಅರಿಷಿಣ-ಕುಂಕುಮ, ಗೊಂಬೆ ಸೇರಿದಂತೆ ಮೊದಲಾದ ಪೂಜಾ ಸಾಮಗ್ರಿಗಳಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣಾ ರಾಜಕಾರಣದ ಹಿನ್ನೆಲೆಯಲ್ಲಿ, ವಾಮಾಚಾರ ನಡೆಸಿರುವ ಅನುಮಾನಗಳಿವೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಗ್ರಾಮಸ್ಥರೋರ್ವರು ಶಂಕೆ ವ್ಯಕ್ತಪಡಿಸುತ್ತಾರೆ.
ಸದ್ಯ ವಾಮಾಚಾರದ ವಿಷಯವು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ. ವಾಮಾಚಾರ ನಡೆಸಿ, ಗ್ರಾಮಸ್ಥರಲ್ಲಿ ಭಯ ಸೃಷ್ಟಿಸುವ ಕಾರ್ಯ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.