
ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ ಕ್ಷೇತ್ರ : ಕುತೂಹಲ ಮೂಡಿಸಿದ ‘ಕೈ’ ಅಭ್ಯರ್ಥಿಗಳ ಆಯ್ಕೆ!
-ಬಿ.ರೇಣುಕೇಶ್–
ಶಿವಮೊಗ್ಗ, ಎ. 13: ಶಿವಮೊಗ್ಗ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣ ಕಣ ರಂಗೇರಲಾರಂಭಿಸಿದೆ. ಈಗಾಗಲೇ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ, ನಾಲ್ಕು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಪಕ್ಷದ, ಉಳಿದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ!
ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಹಾಗೂ ಶಿಕಾರಿಪುರ ಕ್ಷೇತ್ರಗಳ ಹುರಿಯಾಳುಗಳ ಆಯ್ಕೆ ರಾಜಕೀಯ ವಲಯದ ಗಮನ ಸೆಳೆದಿದೆ. ‘ಕೈ’ ಅಭ್ಯರ್ಥಿಗಳ ಆಯ್ಕೆಯತ್ತ ಸರ್ವರ ಚಿತ್ತ ನೆಡುವಂತಾಗಿದೆ.
ಶಿವಮೊಗ್ಗ ನಗರ: ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಭಾರೀ ಪೈಪೋಟಿ ಕಂಡುಬಂದಿದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುವುದು ಊಹಿಸಲು ಆಗದಂತಹ ಸ್ಥಿತಿಯಿದೆ!
11 ಮುಖಂಡರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಕಾರ್ಪೋರೇಟರ್ ಹೆಚ್.ಸಿ.ಯೋಗೇಶ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೆಸರುಗಳು ಮುಂಚೂಣಿಯಲ್ಲಿವೆ.
ಈ ನಡುವೆ ಬಿಜೆಪಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಹೆಸರು ಸಹ ಕೇಳಿಬರಲಾರಂಭಿಸಿದೆ. ಇದು ಕಾಂಗ್ರೆಸ್ ಟಿಕೆಟ್ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿಸಿದೆ. ವರಿಷ್ಠರು ಯಾರ ‘ಕೈ’ ಹಿಡಿಯುತ್ತಾರೆಂಬುವುದು ಸ್ಪಷ್ಟವಾಗುತ್ತಿಲ್ಲ.
ಶಿಕಾರಿಪುರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸಿಕೊಂಡು ಬರುತ್ತಿದ್ದ ಶಿಕಾರಿಪುರ ಕ್ಷೇತ್ರಕ್ಕೆ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಅವರ ಪುತ್ರ ಬಿ.ವೈ.ವಿಜಯೇಂದ್ರ ಅಖಾಡಕ್ಕಿಳಿಯುತ್ತಿದ್ದಾರೆ.
ಇವರ ಎದುರು ಕಾಂಗ್ರೆಸ್ ನಿಂದ ಯಾರು ಕಣಕ್ಕಿಳಿಯುತ್ತಾರೆಂಬುವುದು ನಿಗೂಢವಾಗಿದೆ. ಸದ್ಯ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೋಣಿ ಮಾಲತೇಶ್ ಜೊತೆಗೆ ನಾಗರಾಜ ಗೌಡ ಹಾಗೂ ಪುಷ್ಪಾ ಶಿವಕುಮಾರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರಲಾರಂಭಿಸಿದೆ.
ಇದರಲ್ಲಿ ಗೋಣಿ ಮಾಲತೇಶ್ ಹಾಗೂ ನಾಗರಾಜಗೌಡರವರ ಹೆಸರುಗಳು ಮುಂಚೂಣಿಯಲ್ಲಿವೆ. ಇಬ್ಬರಲ್ಲಿ ಓರ್ವರಿಗೆ ಟಿಕೆಟ್ ಖಚಿತ ಎಂದೇ ಹೇಳಲಾಗುತ್ತಿದೆ. ಜಾತಿ ಲೆಕ್ಕಾಚರಗಳು ಬಿರುಸುಗೊಂಡಿವೆ. ಬದಲಾದ ಬೆಳವಣಿಗೆಯಲ್ಲಿ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಪ್ರಬಲ ಪೈಪೋಟಿವೊಡ್ಡುವ ಲಕ್ಷಣಗಳು ಗೋಚರವಾಗುತ್ತಿವೆ. ಉಳಿದಂತೆ ಜೆಡಿಎಸ್ ಪಕ್ಷ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ? ಇಲ್ಲವೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಶಿವಮೊಗ್ರ ಗ್ರಾಮಾಂತರ: ಸದರಿ ಕ್ಷೇತ್ರದಲ್ಲಿಯೂ ‘ಕೈ’ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. 13 ಜನ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೆಲ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಗಾಗಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿರುವ ಮಾತುಗಳು ಕೇಳಿಬರುತ್ತಿವೆ. ಇದರಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ.
ಸದ್ಯ ಪಲ್ಲವಿ, ನಾರಾಯಣಸ್ವಾಮಿ, ಡಾ.ಶ್ರೀನಿವಾಸ್ ಕರಿಯಣ್ಣ, ಬಲದೇವ್ ಕೃಷ್ಣ, ರವಿಕುಮಾರ್, ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಗ್ರಾಮಾಂತರ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ.