
ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಭೈರಾಪುರ ಮರಾಠಿ ಕ್ಯಾಂಪ್ ಗ್ರಾಮಸ್ಥರು!
ಎನ್.ಆರ್.ಪುರ (ಚಿಕ್ಕಮಗಳೂರು), ಎ. 13: ‘ಮೂಲಸೌಕರ್ಯಗಳ ಕೊರತೆ, ಆಡಳಿತ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಖಂಡಿಸಿ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ’ ಎಂದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಭೈರಾಪುರ ಗ್ರಾಮದ ಮರಾಠಿ ಕ್ಯಾಂಪ್ ಗ್ರಾಮಸ್ಥರು ತಿಳಿಸಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಯಾಗುವ ತಮ್ಮ ಗ್ರಾಮಕ್ಕೆ ಸೂಕ್ತ ಸಂಪರ್ಕ ರಸ್ತೆಯಿಲ್ಲ. ಕುಡಿಯುವ ನೀರಿನ ಪೂರೈಕೆಯಿಲ್ಲ. ಅಂಗನವಾಡಿ ಕೇಂದ್ರವೂ ಇಲ್ಲ. ಮೂರು ಕಿ.ಮೀ. ದೂರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕಾಡಲ್ಲಿ ಪುಟಾಣಿ ಮಕ್ಕಳು ನಡೆದುಕೊಂಡು ಹೋಗಬೇಕು ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಜ್ಜನ ಕಾಲದಿಂದಲೂ ಗ್ರಾಮದಲ್ಲಿ ವಾಸಿಸಿಕೊಂಡು ಬರುತ್ತಿದ್ದೆವೆ. ಕನಿಷ್ಠ ಕುಡಿಯುವ ನೀರಿನ ಸೌಲಭ್ಯವೂ ಕಲ್ಪಿಸಿಲ್ಲ. ಗೋವಿಂದೇಗೌಡರ ಅವಧಿಯಲ್ಲಿ ಕೊಂಚ ನೆರವಾಗಿದ್ದು ಹೊರತುಪಡಿಸಿದರೆ, ಉಳಿದಂತೆ ಯಾವುದೇ ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಮ್ಮಗಳ ಅಹವಾಲು ಆಲಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದ ವಿಮಾನ ನಿಲ್ದಾಣದಿಂದ 15 ಕಿ.ಮೀ. ದೂರದಲ್ಲಿ, ಶಿವಮೊಗ್ಗ – ಶೃಂಗೇರಿ ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರದಲ್ಲಿ ನಮ್ಮ ಗ್ರಾಮವಿದೆ. ಆದಾಗ್ಯೂ ಕೂಡ ನಮ್ಮ ಗ್ರಾಮದತ್ತ ಜನಪ್ರತಿನಿಧಿಗಳು ಹಾಗೂ ಆಡಳಿತ ಗಮನಹರಿಸಿಲ್ಲ ನಿವಾಸಿಗಳು ದೂರಿದ್ದಾರೆ.
ಈ ಕಾರಣದಿಂದ ಪ್ರಸ್ತುತ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ಇನ್ನಾದರೂ ಆಡಳಿತ ನಮ್ಮಗಳ ಅಹವಾಲು ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.