
ಸಾಗರ ವಿಧಾನಸಭಾ ಕ್ಷೇತ್ರ : ಮುಖಂಡ ತೀ.ನಾ.ಶ್ರೀನಿವಾಸ್ ನಾಮಪತ್ರ ಸಲ್ಲಿಕೆ
ಸಾಗರ: ಏ. 13: ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕರಾದ, ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತೊರೆದಿದ್ದ ಆ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ.
ಸಾಗರ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ನಿಯಮಾನುಸಾರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
‘ಈಗಾಗಲೇ ತಾವು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದೇನೆ. ಜನಪರ, ರೈತಪರ ಹೋರಾಟಗಳಿಗೆ ಮತ್ತಷ್ಟು ಬಲ ಬರಬೇಕು. ನೊಂದವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ ಚುನಾವಣಾ ಕಣಕ್ಕಿಳಿದಿದ್ದೆನೆ’ ಎಂದು ತಿಳಿಸಿದ್ದಾರೆ.
ಕಳೆದ ಸರಿಸುಮಾರು 43 ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೆನೆ. ಅತ್ಯಂತ ಪ್ರಾಮಾಣಿಕವಾಗಿ ಜನಸೇವೆ ಮಾಡಿಕೊಂಡು ಬಂದಿದ್ದೇನೆ ಸಾಗರ ವಿಧಾನಸಭಾ ಕ್ಷೇತ್ರದ ಮತದಾರರು ತಮಗೆ ಬೆಂಬಲ ವ್ಯಕ್ತಪಡಿಸುವ ವಿಶ್ವಾಸವಿದೆ ಎಂದು ತೀ.ನಾ.ಶ್ರೀನಿವಾಸ್ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ದಿನ ಸಲ್ಲಿಕೆಯಾಗಿದ್ದು ಕೇವಲ ಒಂದು ನಾಮಪತ್ರ!
ಮೇ 10ರಂದು ನಡಯಲಿರುವ ರಾಜ್ಯ ವಿಧಾನಸಭಾ ಚನಾವಣೆಗೆ, ಏ. 13 ರಿಂದ ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಚಾಲನೆ ದೊರಕಿದೆ. ಮೊದಲ ದಿನ ಶಿವಮೊಗ್ಗ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಸ್ಪರ್ಧಾಳುಗಳಿಂದ ಉತ್ಸಾಹ ಕಂಡುಬರಲಿಲ್ಲ. ಕೇವಲ ಓರ್ವರು ಮಾತ್ರ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ.
‘ಸಾಗರ ಕ್ಷೇತ್ರದಿಂದ ಆಯ್ಕೆ ಬಯಸಿ ಪಕ್ಷೇತರ ಅಭ್ಯರ್ಥಿಯಾಗಿ ತೀ.ನಾ. ಶ್ರೀನಿವಾಸ್ ಅವರು ಸಾಗರ ಚುನಾವಣಾಧಿಕಾರಿಗಳಿಗೆ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯಾಗಿಲ್ಲ’ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.