
ಟಿಕೆಟ್ ಘೋಷಣೆ ಬೆನ್ನಲ್ಲೇ ‘ಕೈ’ ಪಾಳೇಯದಲ್ಲಿ ಭುಗಿಲೆದ್ದ ಭಿನ್ನಮತ!
ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರದಲ್ಲಿ ಟಿಕೆಟ್ ವಂಚಿತರ ಅಸಮಾಧಾನ
ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ ನಾಯಕರು!!
-ಬಿ.ರೇಣುಕೇಶ್-
ಶಿವಮೊಗ್ಗ, ಎ. 16: ವಿಧಾನಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಹಾಗೂ ಶಿಕಾರಿಪುರ ಕ್ಷೇತ್ರಗಳ ಕಾಂಗ್ರೆಸ್ ಪಾಳೇಯದಲ್ಲಿ ಭಿನ್ನಮತ ಭುಗಿಲೆದ್ದಿದೆ!
ಮೂರು ಕ್ಷೇತ್ರಗಳಲ್ಲಿ ಭಾನುವಾರ ಕೆಲ ಟಿಕೆಟ್ ಆಕಾಂಕ್ಷಿಗಳು ಮತ್ತವರ ಬೆಂಬಲಿಗರು ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಲಾರಂಭಿಸಿದ್ದಾರೆ. ಪ್ರತ್ಯೇಕ ಸಭೆ ನಡೆಸಿದ್ದಾರೆ. ಜೊತೆಗೆ ಕೆಲ ನಾಯಕರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಶಿವಮೊಗ್ಗ ಗ್ರಾಮಾಂತರ ಹಾಗೂ ಶಿಕಾರಿಪುರದಲ್ಲಿ ಟಿಕೆಟ್ ವಂಚಿತ ಕೆಲ ನಾಯಕರು ಪಕ್ಷದ ಅಧಿಕೃತ ಅಭ್ಯರ್ಥಿಯ ಎದುರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದಾರೆ.
ಶಿವಮೊಗ್ಗ ನಗರ : ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಶಾಸಕ, ಹೆಚ್.ಎಂ.ಚಂದ್ರಶೇಖರಪ್ಪ ಅವರ ಪುತ್ರ, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ನಡುವೆ ಟಿಕೆಟ್ ರೇಸ್ ನಲ್ಲಿದ್ದ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹಾಗೂ ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಅವರ ಬೆಂಬಲಿಗರು ತಮ್ಮ ನಾಯಕರ ಪರವಾಗಿ ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.
ಎಚ್ ಎಸ್ ಸುಂದರೇಶ್ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಕಚೇರಿ ಎದುರಿನ ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಕಚೇರಿ ಬಾಗಿಲಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್.ಎಸ್.ಸುಂದರೇಶ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರ ನಿವಾಸದ ಎದುರು ಜಮಾಯಿಸಿದ್ದ ಅವರ ಬೆಂಬಲಿಗರು, ಕಾಂಗ್ರೆಸ್ ವರಿಷ್ಠರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಕೆ.ಬಿ.ಪ್ರಸನ್ನಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನೆ ನಡೆಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ: ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಡಾ.ಶ್ರೀನಿವಾಸ್ ಕರಿಯಣ್ಣ ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ.
ಇದಕ್ಕೆ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ನಾರಾಯಣಸ್ವಾಮಿ ಅವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚುನಾವಣಾ ಕಣಕ್ಕಿಳಿಯುವ ಘೋಷಣೆ ಮಾಡಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲಿ ಟಿಕೆಟ್ ಗೆ ಭಾರೀ ಪೈಪೋಟಿ ಕಂಡುಬಂದಿತ್ತು. 13 ಜನ ನಾಯಕರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದರು. ಡಾ.ಶ್ರೀನಿವಾಸ್ ಕರಿಯಣ್ಣ ಅವರಿಗೆ ವರಿಷ್ಠರು ಕೈ ಹಿಡಿದಿದ್ದರು.
ಶಿಕಾರಿಪುರ : ಸದರಿ ಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಗೋಣಿ ಮಾಲತೇಶ್ ಅವರನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಖಾಡಕ್ಕಿಳಿಸಿದೆ. ಮತ್ತೊಂದೆಡೆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜ್ ಗೌಡ ಅವರು, ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರೆ.
ಭಾನುವಾರ ಶಿಕಾರಿಪುರದಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯವ ಘೋಷಣೆ ಮಾಡಿದ್ದಾರೆ. ಮತ್ತೊಂದೆಡೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಯುವ ಮುಖಂಡ, ಮಾಜಿ ಜಿಪಂ ಸದಸ್ಯ ನರಸಿಂಗನಾಯ್ಕ್ ಅವರ ಪುತ್ರ ರಾಘವೇಂದ್ರ ನಾಯ್ಕ್ ಅವರು ಕೂಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಭಿನ್ನಮತ ಎದುರಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಚರ್ಚಿಸಿ ಸೂಕ್ತ ನಿರ್ಧಾರ : ಕೆ.ಬಿ.ಪ್ರಸನ್ನಕುಮಾರ್
*** ‘ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಆದರೆ ಟಿಕೆಟ್ ಕೈ ತಪ್ಪಿದ್ದು ಹೇಗೆಂಬುವುದು ಗೊತ್ತಿಲ್ಲ. ಚುನಾವಣಾ ಕಣಕ್ಕಿಳಿಯಬೇಕೆ? ಬೇಡವೇ ಎಂಬುವುದರ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೆನೆ.

ಪಕ್ಷದ ನಾಯಕರ ಜೊತೆಯೂ ಸಮಾಲೋಚನೆ ನಡೆಸುತ್ತೆನೆ’ ಎಂದು ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ಬಿ.ಪ್ರಸನ್ನಕುಮಾರ್ ಅವರು ತಮ್ಮ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರಿಗೆ ತಿಳಿಸಿದ್ದಾರೆ.
ಪಕ್ಷದ ಕಚೇರಿಯೊಳಗೆ ಬರದಂತೆ ತಡೆ!
*** ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ಬೆಂಬಲಿಗರು ಭಾನುವಾರ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಹೆಚ್.ಎಸ್.ಸುಂದರೇಶ್ ಅವರಿಗೆ, ಕಚೇರಿಯೊಳಗೆ ತೆರಳದಂತೆ ತಡೆ ಹಾಕಿದ ಘಟನೆ ನಡೆಯಿತು.

‘ನಿಮಗೆ ಟಿಕೆಟ್ ನೀಡಿಲ್ಲ. ನಿಮಗೆ ಟಿಕೆಟ್ ಘೋಷಣೆ ಮಾಡುವವರೆಗೆ ಪಕ್ಷದ ಕಚೇರಿಯೊಳಗೆ ಕಾಲಿಡಬೇಡಿ’ ಎಂದು ಬೆಂಬಲಿಗರು ಒತ್ತಾಯಿಸಿದ ಘಟನೆ ನಡೆಯಿತು.