
ಶಿಕಾರಿಪುರ ಅಸೆಂಬ್ಲಿ : ಬಿಜೆಪಿಯಿಂದ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಗರಾಜಗೌಡ ನಾಮಪತ್ರ ಸಲ್ಲಿಕೆ
ಬೃಹತ್ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದ ನಾಗರಾಜಗೌಡ – ಜೆಡಿಎಸ್ ಬೆಂಬಲ ಪ್ರಕಟಿಸಿದ ಹೆಚ್.ಡಿ.ಕುಮಾರಸ್ವಾಮಿ!
ಶಿಕಾರಿಪುರ, ಎ. 17: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ, ಚುನಾವಣಾ ಕಣ ಕಾವೇರಿದೆ. ಸೋಮವಾರ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಿ.ವೈ.ವಿಜಯೇಂದ್ರ ಹಾಗೂ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಗರಾಜಗೌಡ ಅವರು ಶಿಕಾರಿಪುರ ಪಟ್ಟಣದಲ್ಲಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಅವರು ಸಾಂಕೇತಿಕವಾಗಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ. ಎ. 19 ರಂದು ಮೆರವಣಿಗೆಯ ಮೂಲಕ ಮತ್ತೊಮ್ಮೆ ಉಮೇದುವಾರಿಕೆ ಅರ್ಜಿ ಸಲ್ಲಿಸಲಿದ್ದಾರೆ. ಈ ವಿಷಯವನ್ನು ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

‘ಮೆರವಣಿಗೆ ಮೂಲಕ ಆಗಮಿಸಿ ಎ. 19 ರಂದು ಉಮೇದುವಾರಿಕೆ ಅರ್ಜಿ ಸಲ್ಲಿಸುತ್ತಿದ್ದೆನೆ. ಬಿ.ಎಸ್.ಯಡಿಯೂರಪ್ಪ ಮೊದಲಾದ ನಾಯಕರು ಉಪಸ್ಥಿತರಿರಲಿದ್ದಾರೆ’ ಎಂದರು.
ಬೃಹತ್ ಮೆರವಣಿಗೆ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ನಾಗರಾಜ ಗೌಡ ಅವರು ಉಮೇದುವಾರಿಕೆ ಅರ್ಜಿ ಸಲ್ಲಿಕೆಗೂ ಮುನ್ನ, ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದು ಗಮನ ಸೆಳೆಯಿತು.

ಜೆಡಿಎಸ್ ಬೆಂಬಲ: ಈ ನಡುವೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಶಿಕಾರಿಪುರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸದಿರುವ ನಿರ್ಧಾರ ಪ್ರಕಟಿಸಿದ್ದಾರೆ. ಜೊತೆಗೆ ನಾಗರಾಜಗೌಡ ಅವರಿಗೆ ಜೆಡಿಎಸ್ ಪಕ್ಷದ ಬಾಹ್ಯ ಬೆಂಬಲ ಘೋಷಿಸಿದ್ದಾರೆ.ಈ ವಿಷಯವನ್ನು ನಾಗರಾಜ ಗೌಡ ಅವರು ಖಚಿತಪಡಿಸಿದ್ದಾರೆ.
ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ದೂರವಾಣಿಯಲ್ಲಿ ಸಮಾಲೋಚಿಸಿದ್ದೆನೆ.

ತಮಗೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಿದ್ದು, ಅವರು ಕೂಡ ಶಿಕಾರಿಪುರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸದೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.