
ಜಾನುವಾರು ಕಳ್ಳರ ಹಾವಳಿ : ಗಮನಹರಿಸುವರೆ ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು?!
ಶಿವಮೊಗ್ಗ, ಎ. 17: ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಿನಕೊಪ್ಪದ ಕೆ.ಹೆಚ್.ಬಿ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಇತ್ತೀಚೆಗೆ ಜಾನುವಾರು ಕಳ್ಳರ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯ ಜಾನುವಾರು ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಹಗಲು ವೇಳೆ ಮೇಯಲು ಬಿಡುವ ಜಾನುವಾರುಗಳನ್ನು ಕಳ್ಳರು ವ್ಯವಸ್ಥಿತವಾಗಿ ಕಳವು ಮಾಡಿ, ವಾಹನಗಳಲ್ಲಿ ಸಾಗಾಣೆ ಮಾಡುತ್ತಿದ್ದಾರೆ. ಜೊತೆಗೆ ಮನೆಗಳ ಬಳಿ ಕಟ್ಟಿ ಹಾಕುವ ಜಾನುವಾರುಗಳನ್ನು ಕೂಡ ರಾತ್ರೋರಾತ್ರಿ ಕಳವು ಮಾಡಿ ಕೊಂಡೊಯ್ಯುತ್ತಿದ್ದಾರೆ. ಸೋಮವಾರ ಮುಂಜಾನೆ ಕೆ.ಹೆಚ್.ಬಿ. ಕಾಲೋನಿಯಲ್ಲಿ ಎಮ್ಮೆ ಕರುವೊಂದನ್ನು ಕಳ್ಳರು ಅಪಹರಿಸಿದ್ದಾರೆ.
ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಆದಾಗ್ಯೂ ಕಳ್ಳರು ತಮ್ಮ ಕೈಚಳಕ ಮುಂದುವರಿಸಿದ್ದಾರೆ. ಇದು ಜಾನುವಾರು ಪಾಲಕರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.
‘ಮೇಯಲು ಬಿಟ್ಟಿದ್ದ ತಮಗೆ ಸೇರಿದ ಆಕಳನ್ನು ಕಳ್ಳರು ಅಪಹರಿಸಿದ್ದಾರೆ. ಹಾಗೆಯೇ ಇತ್ತೀಚೆಗೆ ನಮ್ಮ ಗ್ರಾಮದ ಎರಡ್ಮೂರು ಆಕಳುಗಳು ಕಳುವಾಗಿವೆ’ ಎಂದು ಸೋಮಿನಕೊಪ್ಪ ಗ್ರಾಮದ ರೈತ ಹಾಗೂ ಗೋಪಾಲಕರಾದ ನಿಜಾಮ್ ಅವರು ತಿಳಿಸಿದ್ದಾರೆ.
‘ಮನೆ ಬಳಿಯಿದ್ದ ಎಮ್ಮೆ ಕರುವನ್ನು ಕಳ್ಳರು ಅಪಹರಿಸಿದ್ದಾರೆ. ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ಸುತ್ತಮುತ್ತ ಹೆಚ್ಚಾಗಿರುವ ಜಾನುವಾರು ಕಳ್ಳರ ಹಾವಳಿ ಕಡಿವಾಣಕ್ಕೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು’ ಎಂದು ಜಾನುವಾರು ಸಾಕಾಣಿಕೆ ಮಾಡುವ ನಾಗರತ್ನ ಎಂಬ ಮಹಿಳೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.