
ಶಿವಮೊಗ್ಗ ನಗರ ಕ್ಷೇತ್ರ ಕಾಂಗ್ರೆಸ್ ಭಿನ್ನಮತ : ಮಾಜಿ ಶಾಸಕರ ಬಂಡಾಯ – ಜೆಡಿಎಸ್ ನಿಂದ ಕಣಕ್ಕೆ?!
-ಬಿ. ರೇಣುಕೇಶ್-
ಶಿವಮೊಗ್ಗ, ಎ. 18: ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಘೋಷಣೆ ನಂತರ, ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಭಿನ್ನಮತ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿಲ್ಲ. ದಿಢೀರ್ ವಿದ್ಯಮಾನವೊಂದರಲ್ಲಿ, ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ತ್ಯಜಿಸಿ, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರಲಾರಂಭಿಸಿದೆ!
ಈ ಸಂಬಂಧ ಬೆಂಗಳೂರಿನಲ್ಲಿ ಕೆ.ಬಿ.ಪ್ರಸನ್ನಕುಮಾರ್ ಅವರು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಹೆಚ್.ಡಿ.ಕೆ. ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ರಸನ್ನಕುಮಾರ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆ.ಎಸ್.ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಣೆ ನಂತರ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಬಲ ಪೈಪೋಟಿವೊಡ್ಡುವ ಉಮೇದಿನಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ, ಕೆಲ ಟಿಕೆಟ್ ಆಕಾಂಕ್ಷಿ ನಾಯಕರ ಬಂಡಾಯ ತಲೆನೋವಾಗಿ ಪರಿಣಮಿಸಿದೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ‘ಕೈ’ ಬಿಟ್ಟು ಜೆಡಿಎಸ್ ನಿಂದ ಅಖಾಡಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿರುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಪ್ರತಿಭಟನೆ – ಸಂಧಾನ: ಪಾಲಿಕೆ ಕಾರ್ಪೋರೇಟರ್ ಹೆಚ್.ಸಿ.ಯೋಗೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದ್ದ ಬೆನ್ನಲ್ಲೇ, ಕಳೆದ ಭಾನುವಾರ ಕೆ.ಬಿ.ಪ್ರಸನ್ನಕುಮಾರ್ ನಿವಾಸದ ಎದುರು ಬೆಂಬಲಿಗರು ಜಮಾಯಿಸಿದ್ದರು. ಪಕ್ಷದ ನಾಯಕರ ವಿರುದ್ದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದ ಪ್ರಸನ್ನಕುಮಾರ್, ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು.
ಚುನಾವಣಾ ಕಣಕ್ಕಿಳಿಯುವ ಕುರಿತಂತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಅವರು ಪ್ರಸನ್ನಕುಮಾರ್ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ತಮಗೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಿದ್ದರು.
ಜಿಲ್ಲಾಧ್ಯಕ್ಷರ ನಡೆ?: ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು ಕೂಡ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ. ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಒಟ್ಟಾರೆ ‘ಕೈ’ ಕಲಹ ದಿನಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ. ಮುಂದೇನಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ತಲಾ ಒಂದು ಸೋಲು – ಗೆಲುವು..!
2013 ರಲ್ಲಿ ಪಾಲಿಕೆ ಕಾರ್ಪೋರೇಟರ್ ಆಗಿದ್ದ ಕೆ.ಬಿ.ಪ್ರಸನ್ನಕುಮಾರ್ ಅವರು, ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದರು. 39,355 ಮತ ಪಡೆದು ಜಯ ಸಾಧಿಸಿದ್ದರು. ಬಿಜೆಪಿ – ಕೆಜೆಪಿ ಕಲಹದ ಲಾಭದಿಂದ 278 ಮತಗಳ ಅಂತರದಲ್ಲಿ, ಕೆಜೆಪಿ ಅಭ್ಯರ್ಥಿ ಎಸ್.ರುದ್ರೇಗೌಡ ( ಪಡೆದ ಮತ 39,077) ಎದುರು ವಿಜಯ ಸಾಧಿಸಿ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು 33,462 ಮತ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು.
2018 ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಕೆ.ಬಿ.ಪ್ರಸನ್ನಕುಮಾರ್ 57,920 ಮತ ಪಡೆದರೆ, ವಿಜೇತ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು 1,04,027 ಮತ ಪಡೆದಿದ್ದರು. ಕೆ.ಎಸ್.ಈಶ್ವರಪ್ಪ ಎದುರು 46,107 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಪ್ರಸ್ತುತ ಚುನಾವಣೆಯಲ್ಲಿಯೂ ಕೆ.ಬಿ.ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಗಾಗಿ ಸಾಕಷ್ಟು ಲಾಬಿ ಕೂಡ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.
ಎಂ.ಶ್ರೀಕಾಂತ್ ಗೆ ಮತ್ತೇ ಕೈ ತಪ್ಪಲಿದೆಯೇ ಜೆಡಿಎಸ್ ಟಿಕೆಟ್?
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಜೆಡಿಎಸ್ ಪಕ್ಷದತ್ತ ಮುಖ ಮಾಡಿದ್ದಾರೆಂಬ ಮಾಹಿತಿಗಳು ದಟ್ಟವಾಗುತ್ತಿದೆ. ಇದರಿಂದ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ, ಆ ಪಕ್ಷದ ಮುಖಂಡ ಎಂ.ಶ್ರೀಕಾಂತ್ ಅವರಿಗೆ ಮತ್ತೆ ಟಿಕೆಟ್ ಸಿಗಲಿದೆಯಾ? ಇಲ್ಲವೇ? ಎಂಬುವುದು ನಿಗೂಢವಾಗಿ ಪರಿಣಮಿಸಿದೆ. 2008 ರಲ್ಲಿ ಮೊದಲ ಬಾರಿಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂ.ಶ್ರೀಕಾಂತ್ ಅವರು, 19,232 ಮತಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದರು.

2013 ರಲ್ಲಿ ಎರಡನೇ ಬಾರಿ ಕಣಕ್ಕಿಳಿದಿದ್ದ ಎ.ಶ್ರೀಕಾಂತ್ 21,638 ಮತ ಗಳಿಸಿದ್ದರು. 2018 ರಲ್ಲಿ ಸ್ಪರ್ಧಾಕಾಂಕ್ಷಿಯಾಗಿದ್ದ ಎಂ.ಶ್ರೀಕಾಂತ್ ಗೆ ಜೆಡಿಎಸ್ ವರಿಷ್ಠರು ಟಿಕೆಟ್ ನೀಡದೆ, ನಿರಂಜನ್ ಅವರನ್ನ ಕಣಕ್ಕಿಳಿಸಿದ್ದರು. ಆದರೆ ಅವರು ಕೇವಲ 5796 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು. ಪ್ರಸ್ತುತ ಚುನಾವಣೆಯಲ್ಲಿ ಎಂ.ಶ್ರೀಕಾಂತ್ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು.