
ಬಿ.ಎಸ್.ಯಡಿಯೂರಪ್ಪ – ಎಸ್. ಬಂಗಾರಪ್ಪ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ 2008 ರ ಚುನಾವಣೆ!
-ಬಿ.ರೇಣುಕೇಶ್-
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ದಿವಂಗತ ಎಸ್.ಬಂಗಾರಪ್ಪ ಎದುರಾಳಿಗಳಾಗಿ ಕಣಕ್ಕಿಳಿದಿದ್ದ 2008 ರ ವಿಧಾನಸಭೆ ಚುನಾವಣೆಯು, ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಅಕ್ಷರಶಃ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿತ್ತು..!
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಯಡಿಯೂರಪ್ಪ ಎದುರು, ಅಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಬಂಗಾರಪ್ಪ ಕಣಕ್ಕಿಳಿಯುವ ಘೋಷಣೆ ಮಾಡಿದ್ದರು. ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು!
ಶಿಕಾರಿಪುರ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿಯೇ, ಹಿಂದೆಂದೂ ಕಾಣದಷ್ಟು ಮಾಧ್ಯಮ ತಂಡಗಳು, ಚುನಾವಣಾ ಸಮೀಕ್ಷೆ ನಡೆಸುವ ಖಾಸಗಿ ಏಜೆನ್ಸಿಗಳು ಆಗಮಿಸಿದ್ದವು. ಬಹುತೇಕ ರಾಷ್ಟ್ರೀಯ ಮಾಧ್ಯಮಗಳ ವರದಿಗಾರರು ಶಿಕಾರಿಪುರದಲ್ಲಿ ಬೀಡುಬಿಟ್ಟಿದ್ದರು.
ಇಡೀ ರಾಜ್ಯ ಸುತ್ತುವ ಉಮೇದಿನಲ್ಲಿದ್ದ ಹಾಗೂ ಶಿಕಾರಿಪುರ ಕ್ಷೇತ್ರದಲ್ಲಿ ಸುಲಭವಾಗಿ ಜಯ ಸಾಧಿಸುವ ವಿಶ್ವಾಸದಲ್ಲಿದ್ದ ಯಡಿಯೂರಪ್ಪಗೆ ತಮ್ಮ ಎದುರು ಬಂಗಾರಪ್ಪ ಕಣಕ್ಕಿಳಿದಿದ್ದುದು, ಅಕ್ಷರಶಃ ಎಡರುತೊಡರಾಗಿ ಪರಿಣಮಿಸಿತ್ತು.
ಒಂದಾದ ವಿಪಕ್ಷಗಳು: ‘ಉರಿಯುವ ಬೆಂಕಿಗೆ ತುಪ್ಪ ಸುರಿದರು’ ಎಂಬಂತೆ, ಯಡಿಯೂರಪ್ಪ ವೇಗಕ್ಕೆ ಕಡಿವಾಣ ಹಾಕಲು ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಶಿಕಾರಿಪುರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಂಗಾರಪ್ಪಗೆ ಬೆಂಬಲ ಘೋಷಣೆ ಮಾಡಿದ್ದವು. ಇದು ಯಡಿಯೂರಪ್ಪ ನಿದ್ದೆಗೆಡಿಸಿತ್ತು. ಫಲಿತಾಂಶ ಏನಾಗಲಿದೆಯೋ? ಎಂಬ ಆತಂಕದ ಕರಿಛಾಯೆಯು ಬಿಜೆಪಿ ಪಾಳೇಯದಲ್ಲಿ ಆವರಿಸುವಂತೆ ಮಾಡಿತ್ತು.

ಇಬ್ಬರು ನಾಯಕರು ಕ್ಷೇತ್ರದಾದ್ಯಂತ ಭಾರೀ ಪ್ರಚಾರ ನಡೆಸಿದ್ದರು. ಈ ನಡುವೆ, ಮತ ಗಳಿಕೆಯಲ್ಲಿ ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಡಲಿದೆ. ಯಾರೇ ಗೆದ್ದರೂ ಎರಡ್ಮೂರು ಸಾವಿರ ಮತಗಳ ಅಂತರ ಮಾತ್ರವಿರಲಿದೆ ಎಂಬಿತ್ಯಾದಿ ಮಾಧ್ಯಮ ವರದಿಗಳು ಪ್ರಕಟಗೊಂಡಿದ್ದವು. ಕೆಲ ರಾಜಕೀಯ ವಿಶ್ಲೇಷಕರು ಯಡಿಯೂರಪ್ಪ ಸೋಲನುಭವಿಸಿದರೂ ಅಚ್ಚರಿಯಿಲ್ಲ ಎಂದು ಭವಿಷ್ಯ ನುಡಿದಿದ್ದರು.
ತಲೆಕೆಳಗಾದ ಲೆಕ್ಕಾಚಾರ: ಆದರೆ ಚುನಾವಣೆ ಫಲಿತಾಂಶ ಮಾತ್ರ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತ್ತು! ಬಂಗಾರಪ್ಪ ಅವರು ಹೀನಾಯ ಸೋಲನುಭವಿಸಿದ್ದರು. ಯಡಿಯೂರಪ್ಪ ಅವರು 83,491 ಮತ ಗಳಿಸಿದ್ದರೆ, ಬಂಗಾರಪ್ಪರವರ ಮತ ಗಳಿಕೆ 37,564 ಆಗಿತ್ತು. 45,927 ಮತಗಳ ಭಾರೀ ಅಂತರದಲ್ಲಿ ಬಂಗಾರಪ್ಪ ಪರಾಭವಗೊಂಡಿದ್ದರು. ಈ ಹಿಂದಿನ ಯಾವ ಚುನಾವಣೆಗಳಲ್ಲಿಯೂ ಇಷ್ಟೊಂದು ದೊಡ್ಡ ಮತಗಳ ಅಂತರದಲ್ಲಿ ಯಡಿಯೂರಪ್ಪಗೆ ಜಯ ದೊರಕಿರಲಿಲ್ಲ!

2004 ರ ಚುನಾವಣೆಯಲ್ಲಿ ಯಡಿಯೂರಪ್ಪ 64,972 ಮತ ಪಡೆದಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಕೆ.ಶೇಖರಪ್ಪ ಅವರು 45,019 ಮತ ಪಡೆದಿದ್ದರು. ಗೆಲುವಿನ ಅಂತರ 19,953 ಮತಗಳಾಗಿತ್ತು.
ನಕಾರಾತ್ಮಕ ಪರಿಣಾಮ: ದಿಢೀರ್ ಆಗಿ ಬಂಗಾರಪ್ಪ ಕಣಕ್ಕಿಳಿದಿದ್ದು ಹಾಗೂ ವಿಪಕ್ಷಗಳು ಅವರಿಗೆ ಬೆಂಬಲವಾಗಿ ನಿಂತಿದ್ದು, ಮತದಾರರ ವಲಯದಲ್ಲಿ ನಕಾರಾತ್ಮಕ ಭಾವ ಮೂಡುವಂತಾಗಿತ್ತು. ಹಾಗೆಯೇ ಯಡಿಯೂರಪ್ಪ ಪರ ಅನುಕಂಪ ಸೃಷ್ಟಿಯಾಗುವಂತೆ ಮಾಡಿತ್ತು.

‘ತಾವು ಸಿಎಂ ಆಗುವುದನ್ನು ತಡೆಯಲು ಬಂಗಾರಪ್ಪರನ್ನು ವಿಪಕ್ಷಗಳು ಕಣಕ್ಕಿಳಿಸಿವೆ. ಷಡ್ಯಂತ್ರ ನಡೆಸಿವೆ. ಶಿಕಾರಿಪುರದ ಜನತೆ ತಮ್ಮನ್ನು ಕೈಬಿಡುವುದಿಲ್ಲ’ ಎಂದು ಯಡಿಯೂರಪ್ಪ ಅವರು ಸಾರ್ವಜನಿಕ ಪ್ರಚಾರ ಸಭೆ, ಮಾಧ್ಯಮಗಳ ಸಂದರ್ಶನದಲ್ಲಿ ನಿರಂತರವಾಗಿ ಹೇಳುತ್ತಿದ್ದರು.
ಸೊರಬ ಸೋಲು: ಮತ್ತೊಂದೆಡೆ, ಸೊರಬ ಕ್ಷೇತ್ರದ ಮೇಲೂ ಶಿಕಾರಿಪುರದಲ್ಲಿ ಬಂಗಾರಪ್ಪ ಸ್ಪರ್ಧೆಯ ಪರಿಣಾಮ ಬೀರುವಂತಾಗಿತ್ತು. ಆ ಕ್ಷೇತ್ರದಲ್ಲಿ ಅವರಿಬ್ಬರ ಪುತ್ರರು ಪರಾಭವಗೊಂಡಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಹರತಾಳು ಹಾಲಪ್ಪ ಜಯ ಸಂಪಾದಿಸಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪ ಹಾಗೂ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಮಧು ಬಂಗಾರಪ್ಪ ಸೋಲನುಭವಿಸಿದ್ದರು.
ಒಟ್ಟಾರೆ 2008 ರ ಶಿಕಾರಿಪುರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂಗಳಿಬ್ಬರು ಎದುರಾಳಿಗಳಾಗಿದ್ದು, ರಾಜ್ಯದ ಅಸೆಂಬ್ಲಿ ಚುನಾವಣಾ ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದಿರುವುದಂತೂ ಸತ್ಯವಾಗಿದೆ!