
ಸಾಗರ ವಿಧಾನಸಭಾ ಕ್ಷೇತ್ರ : ಹರತಾಳು ಹಾಲಪ್ಪ – ಬೇಳೂರು ಗೋಪಾಲಕೃಷ್ಣ ನಡುವೆ ಜಿದ್ದಾಜಿದ್ದಿನ ಹಣಾಹಣಿ!
‘ಅಂದು ಸ್ನೇಹಿತರು… ಇಂದು ಬದ್ಧ ವೈರಿಗಳು..!‘
-ಬಿ.ರೇಣುಕೇಶ್-
‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತೃಗಳಲ್ಲ, ಮಿತ್ರರೂ ಅಲ್ಲ..’ ಎಂಬ ಮಾತು, ಸದ್ಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳಾಗಿರುವ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ..!
ಮಾಜಿ ಸಿಎಂ ಎಸ್.ಬಂಗಾರಪ್ಪ ಗರಡಿಯಲ್ಲಿ ಏಕಕಾಲಕ್ಕೆ ರಾಜಕೀಯ ಪ್ರವೇಶಿಸಿ, ಅವರ ಕೃಪಾಕಟಾಕ್ಷದಿಂದ ಏಕಕಾಲದಲ್ಲಿಯೇ ವಿಧಾನಸಭಾ ಚುನಾವಣಾ ಕಣಕ್ಕಿಳಿದು ಆಯ್ಕೆಯಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಗಳಸ್ಯ-ಕಂಠಸ್ಯರಾಗಿದ್ದರು. ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾಗ ಅವರನ್ನು ಬೆಂಬಲಿಸಿ, ಸಮಾಜವಾದಿ ಪಕ್ಷದ ಚಿಹ್ನೆಯಾದ ಸೈಕಲ್ ನಲ್ಲಿ ವಿಧಾನಸಭೆಗೆ ಆಗಮಿಸಿ ದೇಶದ ಗಮನ ಸೆಳೆದಿದ್ದರು!
ಸೀಮಿತಾವಧಿಯಲ್ಲಿಯೇ ರಾಜಕೀಯ ಕಾರಣಗಳಿಂದ ಗುರು ಎಸ್.ಬಂಗಾರಪ್ಪರಿಂದ ದೂರವಾಗಿದ್ದರು. ಮತ್ತೇ ಬಿಜೆಪಿ ತೆಕ್ಕೆಗೆ ಮರಳಿದ್ದರು. ಆದರೆ ಕಾಲಾಂತರದಲ್ಲಿ, ಬದಲಾದ ರಾಜಕೀಯ ನಡೆ, ನಾನಾ ಕಾರಣಗಳಿಂದ ಬದ್ಧ ವೈರಿಗಳಾಗಿ ಮಾರ್ಪಟ್ಟಿದ್ದರು..!
ಇದೀಗ ಮೊದಲ ಬಾರಿಗೆ ಚುನಾವಣಾ ಅಖಾಡದಲ್ಲಿ, ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಪರಸ್ಪರ ಮುಖಾಮುಖಿಯಾಗಿದ್ದಾರೆ. ಇಬ್ಬರ ನಡುವೆ ವಾಕ್ಸಮರ ತೀವ್ರಗೊಂಡಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕುತ್ತಿದ್ದಾರೆ. ಚುನಾವಣೆಯನ್ನು ಅಕ್ಷರಶಃ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಈ ಕಾರಣದಿಂದ ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣ ಕಣ ರಂಗೇರುವುದರ ಜೊತೆಗೆ ಕಾವೇರುವಂತೆ ಮಾಡಿದೆ. ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಇಬ್ಬರು ನಾಯಕರ ಚುನಾವಣಾ ಹಿನ್ನೋಟ
*** 2004 ರ ವಿಧಾನಸಭೆ ಚುನಾವಣೆಯಲ್ಲಿ ಗೋಪಾಲಕೃಷ್ಣ ಬೇಳೂರು ಸಾಗರ ಕ್ಷೇತ್ರದಿಂದ ಕಣಕ್ಕಿಳಿದು ಮಾವ ಕಾಗೋಡು ತಿಮ್ಮಪ್ಪರವನ್ನು ಪರಾಭವಗೊಳಿಸಿದ್ದರು. ಬೇಳೂರು 57,455 ಮತ ಪಡೆದರೆ, ಕಾಗೋಡು ತಿಮ್ಮಪ್ಪ ಅವರು 42,448 ಮತ ಪಡೆದಿದ್ದರು. ಹಾಗೆಯೇ ಅದೇ ಚುನಾವಣೆಯಲ್ಲಿ ಹೊಸನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹರತಾಳು ಹಾಲಪ್ಪ ಅವರು 49,086 ಮತ ಪಡೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಕ್ಷೇತ್ರದ ಶಾಸಕರಾಗಿದ್ದ ಜಿ.ಡಿ.ನಾರಾಯಣಪ್ಪ ಅವರನ್ನು ಪರಾಭವಗೊಳಿಸಿದ್ದರು.
ತದನಂತರ 2008 ರಲ್ಲಿ ಸೊರಬದಲ್ಲಿ ಹರತಾಳು ಬಿಜೆಪಿಯಿಂದ ಕಣಕ್ಕಿಳಿದು 53,552 ಮತ ಪಡೆದಿದ್ದರು. ತಮ್ಮ ರಾಜಕೀಯ ಗುರು ಎಸ್.ಬಂಗಾರಪ್ಪ ಪುತ್ರರಿಬ್ಬರನ್ನು ಪರಾಭಗೊಳಿಸಿದ್ದರು. ಹಾಗೆಯೇ ಸಾಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬೇಳೂರು, 57,706 ಮತ ಪಡೆದಿದ್ದರು. ಸತತ ಎರಡನೇ ಬಾರಿ ಮಾವ ಕಾಗೋಡು ಅವರನ್ನು ಪರಾಭವಗೊಳಿಸಿದ್ದರು. ಕಾಗೋಡು 54861 ಮತ ಪಡೆದಿದ್ದರು.
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ 2013 ರಲ್ಲಿ ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆಯಾಗಿ ಸಾಗರದಲ್ಲಿ ಮೂರನೇ ಬಾರಿ ಕಣಕ್ಕಿಳಿದ ಬೇಳೂರು, 23,217 ಮತ ಪಡೆದು ಪರಾಭವಗೊಂಡಿದ್ದರು. ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಕಾಗೋಡು ತಿಮ್ಮಪ್ಪ 71,960 ಮತ ಪಡೆದು ಭರ್ಜರಿ ವಿಜಯ ಸಾಧಿಸಿದ್ದರು.
ಮತ್ತೊಂದೆಡಡೆ, ಸೊರಬದಲ್ಲಿ ಕೆಜೆಪಿಯಿಂದ ಕಣಕ್ಕಿಳಿದ ಹರತಾಳು, ಮಧು ಬಂಗಾರಪ್ಪ ಎದುರು 37,316 ಮತ ಪಡೆದು ಪರಾಭವಗೊಂಡಿದ್ದರು.
2018 ರಲ್ಲಿ ಬೇಳೂರು ಹಾಗೂ ಹರತಾಳು ಇಬ್ಬರೂ ಬಿಜೆಪಿಯಲ್ಲಿಯೇ ಇದ್ದರು. ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಅವರಿಗೆ ಸೊರಬ ಕ್ಷೇತ್ರದ ಟಿಕೆಟ್ ನೀಡುವುದಾಗಿ ಬಿಜೆಪಿ ವರಿಷ್ಠರು ಸ್ಪಷ್ಟಪಡಿಸಿದ್ದರು. ಸೊರಬದಿಂದ ಸ್ಪರ್ಧಿಸುವ ತಯಾರಿಯಲ್ಲಿದ್ದ ಹರತಾಳು ಹಾಲಪ್ಪಗೆ, ಸಾಗರದಲ್ಲಿ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು.
ಮತ್ತೊಂದೆಡೆ, ಬೇಳೂರು ಸಾಗರ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಕಾರಣದಿಂದ ಬೇಳೂರು – ಹರತಾಳು ನಡುವೆ ಟಿಕೆಟ್ ಗೆ ಭಾರೀ ಪೈಪೋಟಿಯೇ ಏರ್ಪಟ್ಟಿತ್ತು. ಟಿಕೆಟ್ ಗಿಟ್ಟಿಸಿಕೊಳ್ಳಲು ಇಬ್ಬರು ಭಾರೀ ಲಾಬಿ ನಡೆಸಿದ್ದರು. ಯಡಿಯೂರಪ್ಪ ಕಾರಣದಿಂದ ಹರತಾಳು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡ ಬೇಳೂರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಮಾವ ಕಾಗೋಡು ಪರವಾಗಿ ಪ್ರಚಾರ ನಡೆಸಿದ್ದರು. ಆದರೆ ಹರತಾಳು 78,475 ಮತ ಪಡೆದು ಆಯ್ಕೆಯಾಗಿದ್ದರು. ಕಾಗೋಡು 70,436 ಮತ ಪಡೆದು ಪರಾಭವಗೊಂಡಿದ್ದರು.