
ಕಾಂಗ್ರೆಸ್’ಗೆ ಗುಡ್ ಬೈ ; ಜೆಡಿಎಸ್ ಗೆ ಜೈ ಎಂದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್!
ಬೆಂಗಳೂರು/ಶಿವಮೊಗ್ಗ, ಎ. 21: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು, ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕೆ.ಬಿ.ಪ್ರಸನ್ನಕುಮಾರ್ ವಿಧ್ಯುಕ್ತವಾಗಿ ಜೆಡಿಎಸ್ ಗೆ ಪಾದರ್ಪಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್, ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಮುನಿಸು: ಕೆ.ಬಿ.ಪ್ರಸನ್ನಕುಮಾರ್ ಅವರು ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದ ಕಾರಣದಿಂದ ಮುನಿಸಿಕೊಂಡಿದ್ದರು. ಜೆಡಿಎಸ್ ನಿಂದ ಕಣಕ್ಕಿಳಿಯುವ ಕಸರತ್ತು ಕೂಡ ನಡೆಸಿದ್ದರು. ಆದರೆ ಬಿಜೆಪಿ ತೊರೆದಿದ್ದ ಆಯನೂರು ಮಂಜುನಾಥ್, ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಈ ನಡುವೆ ಮಾಜಿ ಶಾಸಕರ ಮನವೊಲಿಕೆಗೆ ಕಾಂಗ್ರೆಸ್ ಮುಖಂಡರು ಯತ್ನಿಸಿದ್ದರು. ಕಾಂಗ್ರೆಸ್ ನಲ್ಲಿಯೇ ಅವರು ಉಳಿಯುತ್ತಾರೆ ಎಂದ ಆ ಪಕ್ಷದ ಮುಖಂಡರು ಹೇಳಿದ್ದರು. ಇದೀಗ ದಿಢೀರ್ ಆಗಿ ಅವರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.