
ಯಡಿಯೂರಪ್ಪಗೆ ಪ್ರತ್ಯೇಕ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿದ ಬಿಜೆಪಿ!
-ಬಿ. ರೇಣುಕೇಶ್-
ಬೆಂಗಳೂರು/ಶಿವಮೊಗ್ಗ, ಎ. 24: ವಿಧಾನಸಭೆ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಪ್ರಮುಖ ಪಕ್ಷಗಳಲ್ಲಿ ಸ್ಟಾರ್ ಪ್ರಚಾರಕರ ಕ್ಯಾಂಪೇನ್ ಕೂಡ ಜೋರಾಗುತ್ತಿದೆ. ಈ ಕಾರಣದಿಂದ ಹೆಲಿಕ್ಯಾಪ್ಟರ್ ಗಳ ಹಾರಾಟವೂ ಹೆಚ್ಚಾಗಲಾರಂಭಿಸಿದೆ.
ಈ ನಡುವೆ ಬಿಜೆಪಿ ಪಕ್ಷವು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ, ಚುನಾವಣಾ ಪ್ರಚಾರ ಕಾರ್ಯಗಳಿಗೆ ತೆರಳಲು ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, ಪ್ರತ್ಯೇಕ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿದೆ!
ಸೀಮಿತಾವಧಿಯಲ್ಲಿ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಯಡಿಯೂರಪ್ಪರನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಹಾಗೂ ವಯೋಸಹಜ ಕಾರಣಗಳ ಹಿನ್ನೆಲೆಯಲ್ಲಿ, ಬಿಜೆಪಿ ವರಿಷ್ಠರು ಚುನಾವಣೆ ಪೂರ್ಣಗೊಳ್ಳುವವರೆಗೂ ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲ ದಿನಗಳಿಂದ ಯಡಿಯೂರಪ್ಪ ಅವರು ಹೆಲಿಕ್ಯಾಪ್ಟರ್ ಮೂಲಕವೇ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಾರಿನ ಮೂಲಕ ಓಡಾಟ ಕಡಿಮೆಯಾಗಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.
ಸೋಮವಾರ ಕೂಡ ಶಿವಮೊಗ್ಗ ಗ್ರಾಮಾಂತರ ಮತ್ತೀತರ ಕಡೆ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಲು ಯಡಿಯೂರಪ್ಪರವರು ಶಿಕಾರಿಪುರದಿಂದ ಶಿವಮೊಗ್ಗ ನಗರಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದ್ದರು.
ಉತ್ತರದತ್ತ ಚಿತ್ತ: ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯಿತ ಸಮುದಾಯದ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಕಾರಣದಿಂದ ಉತ್ತರ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳತ್ತ ಯಡಿಯೂರಪ್ಪರ ಹೆಚ್ಚಿನ ಪ್ರಚಾರ ಸಭೆ ಆಯೋಜಿಸಲು ಬಿಜೆಪಿ ತಂತ್ರಗಾರಿಕೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಬಿಎಸ್ವೈ ನಿವಾಸಕ್ಕೆ ಕೆ.ಎಸ್.ಈಶ್ವರಪ್ಪ!

*** ಸೋಮವಾರ ಶಿವಮೊಗ್ಗದ ವಿನೋಬನಗರದಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು ಭೇಟಿ ನೀಡಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ಯಡಿಯೂರಪ್ಪರ ಜೊತೆ ಸಮಾಲೋಚಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಕಳೆದ ಹಲವು ದಿನಗಳ ನಂತರ ಯಡಿಯೂರಪ್ಪ – ಈಶ್ವರಪ್ಪ ಅವರು ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ.
ಸಿದ್ದರಾಮಯ್ಯ – ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ : ಯಡಿಯೂರಪ್ಪ ಭವಿಷ್ಯ!
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರವರು ವೀರಶೈವ ಸಮಾಜದ ಕುರಿತಂತೆ ಬಹಳ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕರಾಗಿರುವ ಅವರ ಈ ಹೇಳಿಕೆ ಶೋಭೆ ತರುವಂತದ್ದಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶಿವಮೊಗ್ಗ ನಗರದ ಹೆಲಿಪ್ಯಾಡ್ ನಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ವೀರಶೈವ ಸಮಾಜದ ಕುರಿತಂತೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ವೀರಶೈವ ಸಮಾಜವು ಬಿಜೆಪಿ ಜೊತೆಗಿದ್ದಾರೆ ಎಂಬ ಏಕೈಕ ಕಾರಣದಿಂದ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರೂ ಆ ಪಕ್ಷಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಶೆಟ್ಟರ್ ಅವರು ಕೂಡ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.