
ಎಕ್ಸ್ಪ್ರೆಸ್ ಬಸ್ ಮೂಲಕ ಮತದಾನ ಪ್ರಕ್ರಿಯೆ ಕುರಿತಂತೆ ಜಾಗೃತಿ : ಶಿವಮೊಗ್ಗ ಜಿಲ್ಲಾಡಳಿತದ ವಿನೂತನ ಪ್ರಯೋಗ!
ಶಿವಮೊಗ್ಗ, ಎ. 25: ಮತದಾನ ಕೇಂದ್ರ ಹೇಗಿರಲಿದೆ, ಅಲ್ಲಿರುವ ವ್ಯವಸ್ಥೆಗಳೇನು, ಮತಯಂತ್ರ ಹಾಗೂ ವಿವಿ ಪ್ಯಾಟ್ ಗಳ ಕಾರ್ಯನಿರ್ವಹಣೆ, ವೋಟರ್ ಹೆಲ್ಫಲೈನ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಹಲವು ಮಾಹಿತಿ ಒಳಗೊಂಡ ವಿಶೇಷ ‘ಸ್ವೀಪ್ ಎಕ್ಸ್ಪ್ರೆಸ್ ಬಸ್’ ವೊಂದನ್ನು ಶಿವಮೊಗ್ಗ ಜಿಲ್ಲಾಡಳಿತ ಸಿದ್ದಪಡಿಸಿದೆ.
ಈ ಬಸ್ ಮೇ 9 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಮತದಾನದ ಕುರಿತಂತೆ ಜಾಗೃತಿ ಮೂಡಿಸಲಿದೆ. ವಿಶೇಷವಾಗಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳಲ್ಲಿ ಈ ಬಸ್ ಹೆಚ್ಚಿನದಾಗಿ ಸಂಚರಿಸಲಿದೆ.
ಚಾಲನೆ: ಶಿವಮೊಗ್ಗ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ವಿಶೇಷ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಡಿಸಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಜನರಲ್ಲಿ ಇವಿಎಂ/ವಿವಿ ಪ್ಯಾಟ್ ಸೇರಿದಂತೆ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮತದಾನ ಪ್ರಮಾಣ ಹೆಚ್ಚಿಸುವುದು ಈ ‘ಸ್ವೀಪ್ ಎಕ್ಸ್ಪ್ರೆಸ್ ಬಸ್’ ಸಂಚಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಈ ಹಿಂದೆ ಉತ್ತಮವಾಗಿ ಮತದಾನ ಆಗಿದೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಆಗಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ವತಿಯಿಂದ ಅನೇಕ ಉತ್ತಮ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಕಳೆದ ಬಾರಿಗಿಂತ ಶೇ.10 ರಷ್ಟಾದರೂ ಮತದಾನ ಪ್ರಮಾಣ ಹೆಚ್ಚಬೇಕು. ಈ ಎಕ್ಸ್‍ಪ್ರೆಸ್ ಬಸ್ ಜಿಲ್ಲಾದ್ಯಂತ ಕಡಿಮೆ ಮತದಾನ ಆದ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ. ಮೇ 09 ರವರೆಗೆ ಸಂಚರಿಸಿ ಮತದಾನ ಕುರಿತು ಜಾಗೃತಿ ಮೂಡಿಸಬೇಕೆಂದರು.
‘ಸ್ವೀಪ್ ಎಕ್ಸ್ಪ್ರೆಸ್ ಬಸ್’ ಒಳಗೆ ಮಾದರಿ ಮತದಾನ ಕೇಂದ್ರ, ಮತದಾನ ಕೇಂದ್ರಗಳಲ್ಲಿನ ಮೂಲಭೂತ ಸೌಕರ್ಯಗಳು, ಇವಿಎಂ/ವಿವಿಪ್ಯಾಟ್ ಪ್ರತಿಕೃತಿಗಳು ಹಾಗು ಮತದಾನ ಜಾಗೃತಿ ಬಿತ್ತಿ ಚಿತ್ರಗಳಿವೆ. ಬಸ್ ಹೊರಮೈಯಲ್ಲಿ ಸಿವಿಜಿಲ್ ಆ್ಯಪ್ , 1950 ಟಾಲ್‍ಫ್ರೀ ಸಂಖ್ಯೆ, ವೋಟರ್ ಹೆಲ್ಪ್‍ಲೈನ್ ಪೋರ್ಟಲ್ ಹಾಗೂ ಸ್ವೀಪ್ ಕುರಿತು ಮಾಹಿತಿ ಇದೆ ಎಂದು ತಿಳಿಸಿದ್ಧಾರೆ.
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಮಾತನಾಡಿ, ಮತದಾನ ಕುರಿತು ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಈ ಸ್ವೀಪ್ ಎಕ್ಸ್ಪ್ರೆಸ್ ಬಸ್ ಸಂಚಾರ ಆರಂಭಿಸಲಾಗಿದೆ. ಕಡಿಮೆ ಮತದಾನ ಆದ ಪ್ರದೇಶಗಳಿಗೆ ಇದು ಭೇಟಿ ನೀಡಿ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು. ಹಾಗೂ ಚುನಾವಣಾ ಅಕ್ರಮ ತಡೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕುರಿತು, ಸಿವಿಜಿಲ್ ಆ್ಯಪ್ ಕುರಿತು ಮಾಹಿತಿ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದರು.

ಶಿವಮೊಗ್ಗ ನಗರ ಸೇರಿದಂತೆ, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ ಮತ್ತು ಜನ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಿಗೆ ದಿನಾಂಕ:25/04/2023 ರಿಂದ 02/05/2023 ರ ವರೆಗೆ, ಭೇಟಿನೀಡಿ ಮತದಾನ ಜಾಗೃತಿ ಮೂಡಿಸಲಿದೆ.
ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸ್ವೀಪ್ ನೋಡಲ್ ಅಧಿಕಾರಿ ಶ್ರೀಕಾಂತ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.