
ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳುನಾಡು ನಾಡಗೀತೆ ಅರ್ಧಕ್ಕೆ ಸ್ಥಗಿತ!
ಕನ್ನಡ ನಾಡಗೀತೆಗೆ ಕೆ.ಎಸ್.ಈಶ್ವರಪ್ಪ ಸೂಚನೆ : ಅಣ್ಣಾಮಲೈ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಘಟನೆ
ಶಿವಮೊಗ್ಗ, ಎ. 27: ತಮಿಳುನಾಡಿನ ನಾಡಗೀತೆ ಅರ್ಧಕ್ಕೆ ಸ್ಥಗಿತಗೊಳಿಸಿ, ಕನ್ನಡ ನಾಡಗೀತೆ ಹಾಡು ಹಾಕಿದ ಘಟನೆ ಬಿಜೆಪಿ ಕಾರ್ಯಕ್ರಮದಲ್ಲಿ ಗುರುವಾರ ನಡೆಯಿತು.
ಶಿವಮೊಗ್ಗ ನಗರದ ಎನ್ಇಎಸ್ ಮೈದಾನದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳು ಬಾಂಧವರ ಸಮಾವೇಶವನ್ನು ಬಿಜೆಪಿ ಪಕ್ಷ ಹಮ್ಮಿಕೊಂಡಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತಮಿಳು ನಾಡು ಬಿಜೆಪಿ ಅಧ್ಯಕ್ಷರೂ ಆದ ಕರ್ನಾಟಕ ಚುನಾವಣೆಯ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಭಾಗವಹಿಸಿದ್ದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಸೇರಿದಂತೆ ತಮಿಳು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ನಿರೂಪಕರು ನಾಡಗೀತೆ ಹಾಡಲಾಗುತ್ತದೆ ಎಂದು ಹೇಳಿದ ಹಿನ್ನೆಲೆಯಲ್ಲಿ, ಸಮಾರಂಭದಲ್ಲಿದ್ದವರೆಲ್ಲರೂ ಗೌರವ ಸೂಚಿಸಲು ಎದ್ದು ನಿಂತರು. ಈ ವೇಳೆ ತಮಿಳುನಾಡು ರಾಜ್ಯದ ನಾಡಗೀತೆಯ ಧ್ವನಿಮುದ್ರಿತ ಹಾಡು ಸ್ಪೀಕರ್ ನಲ್ಲಿ ಕೇಳಿಬರಲಾರಂಭಿಸಿತು.
ತಕ್ಷಣವೇ ವೇದಿಕೆಯ ಮುಂಭಾಗಕ್ಕೆ ಆಗಮಿಸಿದ ಕೆ.ಎಸ್.ಈಶ್ವರಪ್ಪ ಅವರು, ಕನ್ನಡ ನಾಡಗೀತೆ ಹಾಡುವವರು ಯಾರಾದರು ಇದ್ದರೆ ವೇದಿಕೆ ಮೇಲೆ ಬಂದು ಹಾಡುವಂತೆ ಮೈಕ್ ಮೂಲಕ ಮನವಿ ಮಾಡಿದರು.
ಅವರು ಮನವಿ ಮಾಡಿಕೊಳ್ಳುತ್ತಿದ್ದ ವೇಳೆಯೇ, ತಮಿಳುನಾಡು ನಾಡಗೀತೆ ಸ್ಥಗಿತಗೊಳಿಸಲಾಗಿತ್ತು. ನಂತರ ಕನ್ನಡ ನಾಡಗೀತೆಯ ಧ್ವನಿಮುದ್ರಿತ ಹಾಡನ್ನು ಸಭೆಯಲ್ಲಿ ಹಾಕಲಾಯಿತು.
ಯಡಿಯೂರಪ್ಪ – ಈಶ್ವರಪ್ಪ ಜೋಡೆತ್ತುಗಳಿದ್ದಂತೆ : ಅಣ್ಣಾಮಲೈ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಣ್ಣಾಮಲೈ ಅವರು ಮಾತನಾಡಿ, ‘ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪರವರು ಜೋಡೆತ್ತುಗಳಿದ್ದಂತೆ. ಇವರಿಬ್ಬರು ಚುನಾವಣೆಗೆ ಸ್ಪರ್ಧಿಸದೆ, ಬಿಜೆಪಿಗೆ ಪೂರ್ಣ ಬಹುಮತ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ’ ಎಂದು ತಿಳಿಸಿದರು.