
ಭದ್ರಾ ಡ್ಯಾಂನಿಂದ ನೀರು ಬಿಡುಗಡೆ : ನದಿಪಾತ್ರದಲ್ಲಿ ಎಚ್ಚರವಹಿಸಲು ಸೂಚನೆ
ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಹಾಗೂ ನದಿಪಾತ್ರದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಉದ್ದೇಶ
ಶಿವಮೊಗ್ಗ, ಏ. 27: ಭದ್ರಾ ಜಲಾಶಯದಿಂದ ತುಂಗಾಭದ್ರಾ ಜಲಾಶಯಕ್ಕೆ ಏ. 27 ರ ಸಂಜೆ 06 ರಿಂದ ಮೇ.09 ರ ಬೆಳಿಗ್ಗೆ 06 ಗಂಟೆಯವರೆಗೆ ನೀರು ಬಿಡುಗಡೆ ಮಾಡುತ್ತಿರುವ ಕಾರಣದಿಂದ ನದಿಪಾತ್ರದಲ್ಲಿ ಸಾರ್ವಜನಿಕರು ಓಡಾಡುವುದು, ದನಕರುಗಳನ್ನು ಮೇಯಿಸುವುದು, ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು ಮತ್ತು ಅನದಿಕೃತವಾಗಿ ನೀರೆತ್ತುವುದನ್ನು ನಿರ್ಬಂಧಿಸಲಾಗಿದೆ.
ಈ ಕುರಿತಂತೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾದ ಎನ್. ಸುಜಾತರವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹಾವೇರಿ ಜಿಲ್ಲೆ, ರಾಣೆಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗಲ್ಲದೇ ನದಿ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಏ. 27 ರ ಸಂಜೆ 06 ರಿಂದ ಮೇ.09 ರ ಬೆಳಗ್ಗೆ 06 ಗಂಟೆಯವರೆಗೆ ಪ್ರತಿ ದಿನ 1000 ಕ್ಯೂಸೆಕ್ ನಂತೆ ಒಟ್ಟು 11,574 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುತ್ತಿದೆ.
ಆದ್ದರಿಂದ ನದಿ ಪಾತ್ರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು, ಸಾರ್ವಜನಿಕರು ಮತ್ತು ರೈತರು ತಿರುಗಾಡುವುದನ್ನು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಹಾಗೂ ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು, ಅನಧಿಕೃತವಾಗಿ ನೀರೆತ್ತುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.