
ವಿಧಾನಸಭೆ ಚುನಾವಣೆ : ಹಿರಿಯರು, ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ – ಶನಿವಾರದಿಂದ ವಿಧ್ಯುಕ್ತ ಚಾಲನೆ!
-ಬಿ.ರೇಣುಕೇಶ್-
ಶಿವಮೊಗ್ಗ, ಏ. 29: ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಪ್ರಸ್ತುತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ, ೮೦ ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ. ಅದರಂತೆ ಶನಿವಾರದಿಂದ ಬ್ಯಾಲೆಟ್ ಪೇಪರ್ ವೋಟಿಂಗ್ (ಮತ ಪತ್ರದ ಮೂಲಕ ಮತದಾನ) ಗೆ ಚಾಲನೆ ದೊರಕಿದೆ.
ಕಳೆದ ಕೆಲ ದಿನಗಳ ಹಿಂದೆಯೇ, ಚುನಾವಣಾ ಆಯೋಗವು ಮನೆಯಿಂದ ಮತದಾನ ಮಾಡಲು ಅರ್ಹತೆ ಹೊಂದಿದವರ ಪಟ್ಟಿ ಸಿದ್ದಪಡಿಸಿತ್ತು. ಸಂಬಂಧಿಸಿದವರಿಂದ ಒಪ್ಪಿಗೆ ಪತ್ರ ಪಡೆದುಕೊಂಡಿತ್ತು. ಅಂತಹವರಿಗೆ ಏ.29 ರಿಂದ ಚುನಾವಣಾಧಿಕಾರಿಗಳು ಅವರ ಮನೆಗಳಿಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ.
ಹಿರಿಯ ನಾಗರೀಕರ ಉತ್ಸಾಹ: ಶಿವಮೊಗ್ಗ ನಗರದಲ್ಲಿ ಹಿರಿಯ ನಾಗರೀಕರು ಹಾಗೂ ವಿಕಲಚೇತರು ಅತ್ಯಂತ ಉತ್ಸಾಹದಿಂದ ತಮ್ಮ ಮನೆಗಳಲ್ಲಿಯೇ ಮತ ಚಲಾಯಿಸಿದರು. ವಿನೋಬನಗರದ ಚಾಚಾ ನೆಹರು ಪಾರ್ಕ್ ರಸ್ತೆಯ ನಿವಾಸಿ, ನಿವೃತ್ತ ಪ್ರಾಂಶುಪಾಲರಾದ 93 ವರ್ಷ ವಯಸ್ಸಿನ ಆರ್.ಪುಟ್ಟುಸಿಂಗ್ ಅವರು ತಮ್ಮ ಜೈ ಭವಾನಿ ನಿವಾಸದಲ್ಲಿ ಮತದಾನ ಮಾಡಿದರು.
‘ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 11 ಚುನಾವಣಾ ಸಿಬ್ಬಂದಿಗಳು ನಿವಾಸಕ್ಕೆ ಆಗಮಿಸಿ ಬ್ಯಾಲೆಟ್ ಪೇಪರ್ ನೀಡಿ ಮತದಾನ ಮಾಡಿಸಿ, ಸೀಲ್ ಮಾಡಿದ್ದ ಮತ ಡಬ್ಬಕ್ಕೆ ಹಾಕಿಸಿದರು. ಮತದಾನ ಪ್ರಕ್ರಿಯೆಯನ್ನು ವೀಡಿಯೋ ಮೂಲಕ ಚಿತ್ರೀಕರಿಸಲಾಯಿತು.
ಮತಪತ್ರಕ್ಕೆ ಪೆನ್ನಿನಿಂದ ಗುರುತು ಮಾಡಿಸಿ, ಮತದಾನ ಮಾಡಿಸಲಾಯಿತು. ಎರಡು ಲಕೋಟೆಗಳಲ್ಲಿ ಚಲಾಯಿಸಿದ ಮತಪತ್ರ ಇಟ್ಟು ಸೀಲ್ ಮಾಡಿ ಡಬ್ಬಿಗೆ ಹಾಕಿಸಲಾಯಿತು. ಈ ಹಿಂದೆ ಮತಗಟ್ಟೆಯಲ್ಲಿ ನಡೆಯುತ್ತಿದ್ದಂತೆಯೇ ಗುಪ್ತ ಮತದಾನ ನಡೆಯಿತು’ ಎಂದು ಆರ್.ಪುಟ್ಟುಸಿಂಗ್ ಅವರ ಪುತ್ರ, ಹಿರಿಯ ಪತ್ರಕರ್ತ ಭರತ್ ರಾಜ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ಸಹಾಯಕ: ‘ಕಳೆದ ಬಾರಿ ಮತಗಟ್ಟೆಗೆ ತೆರಳಲು ಬಹಳ ಕಷ್ಟವಾಗಿತ್ತು. ಆದರೆ ಈ ಬಾರಿ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶವಾಗಿರುವುದು ಸಂತೋಷವಾಗಿದೆ. ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ ಮತ್ತು ಮತದಾನ ಮಾಡಲು ವಿಶೇಷವಾಗಿ ನೀಡಿರುವ ಈ ಸೌಲಭ್ಯವನ್ನು ಹಿರಿಯರು ಬಳಸಿಕೊಳ್ಳಬೇಕು’ ಎಂದು ಆರ್. ಪುಟ್ಟುಸಿಂಗ್ ಅವರು ಮನವಿ ಮಾಡಿದ್ದಾರೆ.
‘ತಪ್ಪದೆ ಮತ ಚಲಾಯಿಸಿ’ : ನಿವೃತ್ತ ಪ್ರಾಂಶುಪಾಲ ಆರ್.ಪುಟ್ಟುಸಿಂಗ್ ಮನವಿ
*** ‘ಕಳೆದ ಬಾರಿ ಮತಗಟ್ಟೆಗೆ ತೆರಳಲು ಬಹಳ ಕಷ್ಟವಾಗಿತ್ತು. ಆದರೆ ಈ ಬಾರಿ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶವಾಗಿರುವುದು ಸಂತೋಷವಾಗಿದೆ. ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ ಮತ್ತು ಮತದಾನ ಮಾಡಲು ವಿಶೇಷವಾಗಿ ನೀಡಿರುವ ಈ ಸೌಲಭ್ಯವನ್ನು ಹಿರಿಯರು ಬಳಸಿಕೊಳ್ಳಬೇಕು’ ಎಂದು

ಶಿವಮೊಗ್ಗದ ಚಾಚಾ ನೆಹರು ಪಾರ್ಕ್ ಬಡಾವಣೆ ನಿವಾಸಿ ನಿವೃತ್ತ ಪ್ರಾಂಶುಪಾಲರಾದ, 93 ವರ್ಷ ವಯೋಮಾನದ ಆರ್. ಪುಟ್ಟುಸಿಂಗ್ ಅವರು ಮನವಿ ಮಾಡಿದ್ದಾರೆ. ಇವರು ಶನಿವಾರ ಮನೆಯಲ್ಲಿಯೇ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಿದರು.
ಚುನಾವಣಾ ಆಯೋಗದ ವಿನೂತನ ಕ್ರಮ
*** 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷ ಚೇತನರು ಮತಗಟ್ಟೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಮತ ಹಾಕುವುದು ಕಷ್ಟಕರವಾಗಲಿದೆ ಎಂಬ ಹಿನ್ನೆಲೆಯಲ್ಲಿ ಅಂಚೆ ಮತಪತ್ರದ ಮೂಲಕ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.

ಚುನಾವಣಾ ಆಯೋಗದ ಈ ವಿನೂತನ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಯೋವೃದ್ದ ಹಾಗೂ ವಿಕಲಚೇತನ ಮತದಾರರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮನೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯು ಕೂಡ ಅಚ್ಚುಕಟ್ಟಾಗಿ ನಡಸಲಾಗುತ್ತಿದೆ. ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರವಹಿಸಲಾಗುತ್ತಿದೆ.