
ನರೇಂದ್ರ ಮೋದಿ, ಅಮಿತ್ ಶಾ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಶಿವಮೊಗ್ಗ, ಏ. 30: ಶಿವಮೊಗ್ಗ ನಗರದ ಎನ್ಇಎಸ್ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ದ ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ, ಉಳುವವನೇ ಭೂ ಒಡೆಯ ಎಂಬ ಐತಿಹಾಸಿಕ ಕಾರ್ಯಕ್ರಮ ಜಾರಿಗೆ ತಂದು ಲಕ್ಷಾಂತರ ಜನರಿಗೆ ಭೂ ಒಡೆತನದ ಹಕ್ಕು ನೀಡಲಾಯಿತು. ಇದೇನು ಮೋದಿ, ಅಮಿತ್ ಶಾ ಜಾರಿಗೆ ತಂದಿದ್ದರಾ? ಇವರು ಒಂದಿಂಚು ಭೂಮಿಯನ್ನುಕೂಡ ಯಾರಿಗೂ ಕೊಟ್ಟಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇವರು ಬರೀ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ದಂಗೆಗಳು ಏಳುತ್ತವೆ ಎಂದು ಅಮಿತ್ ಶಾ ಹೇಳಿದ್ದಾರೆ. ಪ್ರಚೋದನಕಾರಿಯಾಗಿ ಮಾತನಾಡಿ ಬಡವರ ನಡುವೆಯೇ ಜಗಳ ಹಚ್ಚುವ ಕಾರ್ಯ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಕೆಲಸಗಳನ್ನೇ, ಹೊಸದಾಗಿ ಸುಣ್ಣ ಬಳಿದು ಉದ್ಘಾಟಿಸುವ ಕಾರ್ಯವನ್ನು ನರೇಂದ್ರ ಮೋದಿಯವರು ನಡೆಸುತ್ತಿದ್ದಾರೆ. ಇದೊಂದು ಸುಳ್ಳು ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರವು ಶೇ.40 ರಷ್ಟು ಕಮೀಷನ್ ಸರ್ಕಾರವಾಗಿದೆ. ಇದನ್ನು ಗುತ್ತಿಗೆದಾರರೇ ಬಹಿರಂಗಪಡಿಸಿದ್ದಾರೆ. ಈ ಕಾರಣದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಣಮಟ್ಟದ ಕೆಲಸಗಳೇ ಆಗಿಲ್ಲ. ಲಂಚವಿಲ್ಲದೆ ಯಾವುದೇ ಕಾರ್ಯಗಳು ನಡೆಯಲಿಲ್ಲ ಎಂದು ಆರೋಪಗಳ ಸುರಿಮಳೆಗೈದರು.
ಸಮಾರಂಭದಲ್ಲಿ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೀಶ್ ಸೇರಿದಂತೆ ಮೊದಲಾದವರಿದ್ದರು.