
ಚುನಾವಣೆ ಕಾವು, ಬಿಸಿಲ ಧಗೆಗೆ ಬಸವಳಿದ ರಾಜಕಾರಣಿಗಳು..!
#ಮತದಾರ ಪ್ರಭುಗಳ ಮನವೊಲಿಕೆಗೆ ಜನಸೇವಕರ ಭಾರೀ ಕಸರತ್ತು!!
– ಬಿ. ರೇಣುಕೇಶ್ –
ಒಂದೆಡೆ ಚುನಾವಣೆ ಕಾವು, ಮತ್ತೊಂದೆಡೆ ಬಿಸಿಲ ಧಗೆಯಿಂದ ಕೆಲ ರಾಜಕಾರಣಿಗಳು ಅಕ್ಷರಶಃ ಬಸವಳಿದಿದ್ದಾರೆ. ಬೆವರು ಹರಿಸಲಾರಂಭಿಸಿದ್ದಾರೆ. ಯಾವಾಗ ಚುನಾವಣೆ ಪೂರ್ಣಗೊಳ್ಳಲಿದೆಯೋ ಎಂದು ಕಾದು ಕುಳಿತುಕೊಳ್ಳುವಂತೆ ಮಾಡಿದೆ..!
ಹೌದು. ಪ್ರಸ್ತುತ ಬೇಸಿಗೆ ವೇಳೆ ತಾಪಮಾನದ ಪ್ರಮಾಣದಲ್ಲಿ, ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಬಿರು ಬಿಸಿಲು ನಾಗರೀಕರನ್ನು ಹೈರಾಣಾಗಿಸಿದೆ. ಸುಡು ಬಿಸಿಲಿನಲ್ಲಿ ಎದುರಾಗಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯು ಅಖಾಡದಲ್ಲಿರುವ ಹಲವು ಅಭ್ಯರ್ಥಿಗಳನ್ನು ಹೈರಾಣಾಗಿಸಿದೆ.
ಇಷ್ಟು ದಿನ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಆರಾಮಾಗಿದ್ದವರು, ಎಸಿ ಕಾರುಗಳಲ್ಲಿ ಓಡಾಡಿಕೊಂಡಿದ್ದವರು ಇದೀಗ ಬಿರು ಬಿಸಿಲಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಊರೂರು, ಬೀದಿ ಬೀದಿ ಸುತ್ತು ಹಾಕುತ್ತಿದ್ದಾರೆ. ಹಗಲುರಾತ್ರಿಗಳ ಪರಿವೆಯೇ ಇಲ್ಲದೆ ಮತದಾರ ಪ್ರಭುಗಳ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.
ಇಷ್ಟು ದಿನ ಲಕಲಕ ಹೊಳೆಯುತ್ತಿದ್ದ ಕೆಲ ರಾಜಕಾರಣಿಗಳ ಮುಖಗಳು ಕಳೆಗುಂದಿವೆ! ಸರಿಯಾಗಿ ಊಟತಿಂಡಿ ಮಾಡದಿರುವುದು, ನಿದ್ರೆ-ವಿಶ್ರಾಂತಿಯಿಲ್ಲದಿರುವುದು, ಬಿಸಿಲಿನಲ್ಲಿ ಓಡಾಟ, ಚುನಾವಣೆಯ ಒತ್ತಡಗಳಿಂದ ಕೆಲ ರಾಜಕಾರಣಿಗಳ ಮುಖ ಕಪ್ಪಿಟ್ಟಿದೆ. ಜೊತೆಗೆ ದೇಹದ ತೂಕವು ಇಳಿಕೆಯಾಗಿದೆ!!
ಬಿಸಿಲಿನ ಬೇಗೆಯಿಂದ ಪಾರಾಗಲು ಪ್ರಚಾರದ ವೇಳೆ ರಾಜಕಾರಣಿಗಳು ಎಳನೀರು, ಮಜ್ಜಿಗೆ, ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ. ಬಹುತೇಕ ಕಡೆ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ರೋಡ್, ಪಾದಯಾತ್ರೆ ಪ್ರಚಾರ ಕಾರ್ಯಗಳು ಹೆಚ್ಚಿನದಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ.
ಹರಸಾಹಸ: ಬಿರು ಬಿಸಿಲಿನ ಪರಿಣಾಮ ಪ್ರಚಾರ ಸಭೆಗಳಲ್ಲಿಯೂ ಕಂಡುಬರಲಾರಂಭಿಸಿದೆ. ಪ್ರಮುಖ ನಾಯಕರ ಪ್ರಚಾರ ಸಭೆಗಳಿಗೆ ಜನರನ್ನು ಕರೆತಂದು, ಸಮಾರಂಭದ ಕೊನೆಯವರೆಗೆ ಜನರನ್ನು ಸಭೆಯಲ್ಲಿರುವಂತೆ ನೋಡಿಕೊಳ್ಳಲು ರಾಜಕಾರಣಿಗಳು ಹೆಣಗಾಡುವಂತಾಗಿದೆ.
ಡಯಟ್ : ಇನ್ನೊಂದೆಡೆ, ಕೆಲ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿಯೂ ತಮ್ಮ ಆರೋಗ್ಯ ಹಾಗೂ ದೈನಂದಿನ ಜೀವನಶೈಲಿಯತ್ತಲೂ ಚಿತ್ತ ಹರಿಸಿದ್ದಾರೆ. ಹಿತಮಿತ ಆಹಾರ ಸೇವನೆ ಮಾಡುವ ಮೂಲಕ, ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರವಹಿಸುತ್ತಿದ್ದಾರೆ. ಜೊತೆಗೆ ನಿಯಮಿತವಾಗಿ ವೈದ್ಯರ ಸಲಹೆ-ಸೂಚನೆ ಪಡೆದುಕೊಳ್ಳುತ್ತಿದ್ದಾರೆ.
ಸಖತ್ ಡಿಮ್ಯಾಂಡ್!: ಇಷ್ಟು ದಿನ ಜನ ಸೇವಕರನ್ನು ಹುಡುಕಿಕೊಂಡು ಹೋಗುತ್ತಿದ್ದ ಮತದಾರ ಪ್ರಭುಗಳನ್ನು, ಇದೀಗ ಜನ ಸೇವಕರೇ ಹುಡುಕಿಕೊಂಡು ಬರುತ್ತಿದ್ದಾರೆ. ಮತದಾರ ಪ್ರಭುಗಳಿಗೆ ಸಖತ್ ಡಿಮ್ಯಾಂಡ್ ಕಂಡುಬಂದಿದೆ!
ರಾಜಕಾರಣಿಗಳ ಬಾಡಿ ಲಾಂಗ್ವೇಜ್ ಕೂಡ ಬದಲಾಗಿದೆ. ಕಂಡಕಂಡಲ್ಲಿ ಮತದಾರರ ಕೈ ಮುಗಿಯುವುದು, ಹಿರಿಯರಾಗಿದ್ದರೆ ಕಾಲಿಗೆ ಬೀಳುವುದು, ನಗು ಮೊಗ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರದ ಅಬ್ಬರ..!
*** ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಪ್ರಸ್ತುತ ಚುನಾವಣೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಚಾರಕ್ಕೆ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ.

ಸೋಶಿಯಲ್ ಮೀಡಿಯಾಗಳ ಮೂಲಕ ಮತದಾರರನ್ನು ಅತ್ಯಂತ ಸುಲಭವಾಗಿ ತಲುಪಬಹುದು ಎಂಬ ಇರಾದೆಯಲ್ಲಿರುವ ರಾಜಕೀಯ ಪಕ್ಷಗಳು, ಭಾರೀ ಪ್ರಮಾಣದ ಚುನಾವಣಾ ಪೋಸ್ಟಿಂಗ್ ಗಳನ್ನು ಹರಿಬಿಡುತ್ತಿವೆ. ಜಾಹೀರಾತುಗಳ ಸುರಿಮಳೆಯಾಗುತ್ತಿದೆ. ಪೈಪೋಟಿಗೆ ಬಿದ್ದವರ ರೀತಿಯಲ್ಲಿ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆ. ಮತ್ತೊಂದೆಡೆ, ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಪಕ್ಷಗಳು ಹಾಗೂ ನಾಯಕರ ಆರೋಪ-ಪ್ರತ್ಯಾರೋಪಗಳು ಕಾವೇರಿದೆ. ಸಾಕಷ್ಟು ಸದ್ದು ಮಾಡುತ್ತಿದೆ.