
ತೀರ್ಥಹಳ್ಳಿ – ‘ಬಿಜೆಪಿಯವರಿಗೆ 40 ನಂಬರ್ ಎಂದರೇ ಇಷ್ಟ – ಅವರಿಗೆ 40 ಸೀಟ್ ಮಾತ್ರ ನೀಡಿ’ : ರಾಹುಲ್ ಗಾಂಧಿ
ತೀರ್ಥಹಳ್ಳಿ, ಮೇ 2: ‘ಬಿಜೆಪಿಯವರಿಗೆ 40 ನಂಬರ್ ಮೇಲೆ ಬಹಳ ಪ್ರೀತಿಯಿದೆ. ಈ ಕಾರಣದಿಂದ ಅವರಿಗೆ 40 ಸೀಟ್ ಮಾತ್ರ ನೀಡಿ’ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಮತದಾರರಿಗೆ ಕರೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ಕಳ್ಳತನ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದೆಯೂ ಹೀಗೆಯೇ ಮಾಡಲಿದೆ. ಈ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ಮೋದಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅವರು ಬೇರೆ ಯಾರ ಹೆಸರನ್ನು ಹೇಳುವುದಿಲ್ಲ. ಭೂಮಿಯಲ್ಲಿ ಕೇವಲ ಅವರೊಬ್ಬರೇ ಇಲ್ಲ. ಸಾಮಾನ್ಯ ಜನರೂ ಇದ್ದಾರೆ. ಹಾಗಾಗಿ ಮೊದಲು ಸಾಮಾನ್ಯ ಜನರ ಬಗ್ಗೆ ಮಾತನಾಡಿ ಎಂದು ಪ್ರಧಾನಿ ವಿರುದ್ದ ಟೀಕಾಪ್ರಹಾರ ನಡೆಸಿದರು.
ಪ್ರಸ್ತುತ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಿಲಿಂಡರ್, ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳವಾಗಿದೆ. ಜನಸಾಮಾನ್ಯರು ಜೀವನ ನಡೆಸುವುದೆ ದುಸ್ತರವಾಗಿ ಪರಿಣಮಿಸಿದೆ. ದೇಶದ ಸಂಪತ್ತು ಕೇವಲ ಶೇ. 1 ರಷ್ಟು ಜನರ ಬಳಿ ಸಂಗ್ರಹವಾಗಿದೆ.
ನಿರುದ್ಯೋಗ, ಬಡತನದ ಪ್ರಮಾಣ ಹೆಚ್ಚಾಗಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ಹಲವು ಭರವಸೆಗಳನ್ನು ನೀಡಿದೆ. ಸರ್ವ ವರ್ಗಗಳ ಶ್ರೇಯೋಭಿವೃದ್ದಿಗೆ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ. ಎಲ್ಲೇ ಹೋದರು ಪ್ರೀತಿ ಹಂಚುತ್ತಾರೆ. ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರೊಂದಿಗೂ ಬೆರೆಯುತ್ತಾರೆ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಕಾರಣದಿಂದ ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ವೇದಿಕೆಗೆ ಆಗಮಿಸದ ಅಭ್ಯರ್ಥಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಅವರು ವೇದಿಕೆ ಮೇಲೆ ಆಗಮಿಸದೆ, ಕೆಳಭಾಗದ ಮೀಡಿಯಾ ಗ್ಯಾಲರಿಯಲ್ಲಿ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಣೆ ಮಾಡಿದ್ದು ಕಂಡುಬಂದಿತು.
ಉಳಿದಂತೆ ವೇದಿಕೆಯಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡ ಕೆ.ಸಿ.ವೇಣುಗೋಪಾಲ್, ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ, ಆರ್.ಎಂ.ಮಂಜುನಾಥಗೌಡ, ಗೀತಾ ಶಿವರಾಜಕುಮಾರ್, ಮಧು ಬಂಗಾರಪ್ಪ, ಹೆಚ್.ಎಸ್.ಸುಂದರೇಶ್ ಸೇರಿದಂತೆ ಮೊದಲಾದವರಿದ್ದರು.