
ತೀರ್ಥಹಳ್ಳಿ – ‘ರಾಹುಲ್ ಗಾಂಧಿ ಅಭಿಮಾನಿಯಾಗಿ ಬಂದಿದ್ದೆನೆ’ : ನಟ ಶಿವರಾಜಕುಮಾರ್
ತೀರ್ಥಹಳ್ಳಿ, ಮೇ 2: ಚಿತ್ರನಟ ಶಿವರಾಜಕುಮಾರ್ ಅವರು ಕಳೆದ ಮೂರು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.
ಈ ನಡುವೆ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಮಂಗಳವಾರ ಆಯೋಜಿತವಾಗಿದ್ದ ಕಾಂಗ್ರೆಸ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿರವರ ಜೊತೆ ವೇದಿಕೆ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ತಾವು ರಾಹುಲ್ ಗಾಂಧಿ ಅಭಿಮಾನಿಯಾಗಿದ್ದೆನೆ. ಅವರನ್ನು ನೋಡಲೆಂದು ಆಗಮಿಸಿದ್ದೆನೆ. ಭಾರತ್ ಜೋಡೋ ಯಾತ್ರೆ ನೋಡಿ ತಮಗೆ ಅತೀವ ಸಂತೋಷ ಉಂಟಾಯಿತು.
ಅವರ ಫಿಟ್ನೆಸ್ ಇಷ್ಟವಾಯಿತು. ಒಂದು ಉದ್ದೇಶಕ್ಕಾಗಿ ಇಡೀ ದೇಶವನ್ನು ನಡೆದುಕೊಂಡು ಹೋದ ಅವರ ಬಗ್ಗೆ ಅಭಿಮಾನವಿದೆ.
ನನಗೆ ರಾಜಕೀಯ ಗೊತ್ತಿಲ್ಲ. ನಾನೊಬ್ಬ ನಟನಷ್ಟೆ. ನನ್ನ ಪತ್ನಿ ಗೀತಾ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಈಗಾಗಲೇ ಅವರು ಒಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಹಾಗೆಯೇ ಮಾವ ಬಂಗಾರಪ್ಪ, ಮಧು ಬಂಗಾರಪ್ಪ ಮೊದಲಿನಿಂದಲೂ ರಾಜಕಾರಣದಲ್ಲಿದ್ದರು ಎಂದರು.
ಯಾರನ್ನು ಆಯ್ಕೆ ಮಾಡಬೇಕು ಎಂಬುವುದು ನಿಮಗೆ ಗೊತ್ತಿದೆ. ಜಯಭೇರಿ ಬಾರಿಸಲಿ ಎಂದು ಹಾಗೂ ನೀವೆಲ್ಲ ಆಶೀರ್ವಾದ ಮಾಡಿ ಎಂದು ಕೋರಿಕೊಳ್ಳುತ್ತೆನೆ ಎಂದು ಶಿವರಾಜಕುಮಾರ್ ತಿಳಿಸಿದ್ದಾರೆ.