
ಮೊಬೈಲ್ ಪೋನ್ ಮೂಲಕ ಬಾಲಕಿಯ ಅಶ್ಲೀಲ ಫೋಟೋ ತೆಗೆದು ಕಿರುಕುಳ : ಯುವಕನಿಗೆ ಜೈಲು ಶಿಕ್ಷೆ!
ಶಿವಮೊಗ್ಗ, ಮೇ 3: ಮೊಬೈಲ್ ನಲ್ಲಿ ಬಾಲಕಿಯ ಅಶ್ಲೀಲ ಫೋಟೋ ತೆಗೆದು ಕಿರುಕುಳ ನೀಡುತ್ತಿದ್ದ ಯುವಕನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ – II (POCSO) ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಶಿವಮೊಗ್ಗ ನಗರದ ನಿವಾಸಿ 24 ವರ್ಷ ವಯೋಮಾನದ ಯುವಕನೆ ಜೈಲು ಶಿಕ್ಷೆಗೆ ಗುರಿಯಾದವನೆಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 3,01,000 ರೂ. ದಂಡ ವಿಧಿಸಲಾಗಿದೆ. ಮೇ 2 ರಂದು ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಶಿಕ್ಷೆಗೊಳಗಾದ ಯುವಕನು, 2019 ರಲ್ಲಿ 14 ವರ್ಷ ವಯೋಮಾನದ ಬಾಲಕಿಯ ಅಶ್ಲೀಲ ಫೋಟೋಗಳನ್ನು ಮೊಬೈಲ್ ಪೋನ್ ಮೂಲಕ ತೆಗೆದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಕುರಿತಂತೆ ನೊಂದ ಬಾಲಕಿಯ ತಾಯಿಯು ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಂದು ಮಹಿಳಾ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಆಗಿದ್ದ ಅಭಯಪ್ರಕಾಶ್ ಸೋಮನಾಳ್ ಹಾಗೂ ಮಹಿಳಾ ಸಿಬ್ಬಂದಿ ಸರೋಜರವರು ಪ್ರಕರಣದ ತನಿಖೆ ನಡೆಸಿದ್ದರು. ಆರೋಪಿತ ಯುವಕನನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.