
ಶಿವಮೊಗ್ಗ : ಆಟೋ ಚಾಲಕರಿಬ್ಬರ ಪ್ರಾಮಾಣಿಕತೆ!
*ತಮಗೆ ಸಿಕ್ಕಿದ್ದ ಸಾವಿರಾರು ನಗದು, ದುಬಾರಿ ಬೆಲೆಯ ಮೊಬೈಲ್ ಪೋನ್ ಹಿಂದಿರುಗಿಸಿದರು
-ಬಿ.ರೇಣುಕೇಶ್-
ಶಿವಮೊಗ್ಗ, ಮೇ 4: ಶಿವಮೊಗ್ಗ ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಆಟೋ ಚಾಲಕರಿಬ್ಬರು ತಮಗೆ ಸಿಕ್ಕಿದ್ದ ನಗದು ಹಾಗೂ ಮೊಬೈಲ್ ಪೋನ್ ನನ್ನು, ಪೊಲೀಸರ ಮೂಲಕ ಕಳೆದುಕೊಂಡವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.
ಇವರ ಪ್ರಾಮಾಣಿಕತೆ, ಉತ್ತಮ ನಡವಳಿಕೆ ಮೆಚ್ಚಿ ಪೊಲೀಸ್ ಇಲಾಖೆ ಹಾಗೂ ವಸ್ತುಗಳನ್ನು ಕಳೆದುಕೊಂಡಿದ್ದವರು ಸದರಿ ಆಟೋ ಚಾಲಕರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಹಣವಿದ್ದ ಬ್ಯಾಗ್: 30-4-2023 ರಂದು ಶ್ರೀನಿವಾಸಗೌಡ ಎಂಬುವರ ಕಾರು ಶರಾವತಿ ನಗರದ ಬಳಿ ದುರಸ್ತಿಗೀಡಾಗಿತ್ತು. ಅಲ್ಲಿಯೇ ಇದ್ದ ಜೆ. ಪಿ. ನಗರ ಬಡಾವಣೆಯ ಆಟೋ ಚಾಲಕ ಫೈರೋಜ್ ಖಾನ್ ಎಂಬುವರು ಕಾರನ್ನು ತಳ್ಳಿ ಚಾಲನೆಯಾಗಲು ನೆರವಾಗಿದ್ದರು.

ಈ ವೇಳೆ ಶ್ರೀನಿವಾಸಗೌಡ ಅವರು 22 ಸಾವಿರ ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಅಡಕೆ ಮಂಡಿಯ ಕೀಯಿದ್ದ ಬ್ಯಾಗ್ ನ್ನು ಆಟೋದಲ್ಲಿಯೇ ಬಿಟ್ಟು ಮರೆತು ಹೋಗಿದ್ದರು. ಬ್ಯಾಗ್ ನ್ನು ಆಟೋ ಚಾಲಕ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಶ್ರೀನಿವಾಸಗೌಡರವರಿಗೆ ಹಿಂದಿರುಗಿಸಿದ್ದರು.
ಸದರಿ ಚಾಲಕನನ್ನು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಅಭಿನಂದಿಸಲಾಗಿದೆ. ಈ ವೇಳೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಇನ್ಸ್’ಪೆಕ್ಟರ್ ಕೆ.ವಿ.ಸತೀಶ್ ಕುಮಾರ್ ಉಪಸ್ಥಿತರಿದ್ದರು.
ದುಬಾರಿ ಮೊಬೈಲ್: ಮೇ 2 ರಂದು ರಾತ್ರಿ ನಗರದ ಹೊರವಲಯ ಸೋಮಿನಕೊಪ್ಪದ ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯ ನಿವಾಸಿ ನಿವೃತ್ತ ಇಂಜಿನಿಯರ್ ಈಶ್ವರಪ್ಪ ಎಂಬುವರು, ಬಡಾವಣೆಯ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯ ಧ್ವಜದ ಕಟ್ಟೆಯ ಬಳಿ ಕುಳಿತುಕೊಂಡಿದ್ದರು. 30 ಸಾವಿರ ರೂ. ಮೌಲ್ಯದ ತಮ್ಮ ಮೊಬೈಲ್ ಫೋನ್ ನನ್ನು, ಧ್ವಜದ ಕಟ್ಟೆಯ ಮೇಲಿಟ್ಟು ಮೆರೆತು ಮನೆಗೆ ಹಿಂದಿರುಗಿದ್ದರು.
ಅದೆ ವೇಳೆ ಪ್ರಯಾಣಿಕರೋರ್ವರನ್ನು ಬಿಡಲು ಆಗಮಿಸಿದ್ದ ದುರ್ಗಿಗುಡಿ ಆಟೋ ಸ್ಟ್ಯಾಂಡ್ ಚಾಲಕ ರವಿ ಎಂಬುವರು ಮೊಬೈಲ್ ಫೋನ್ ಗಮನಿಸಿದ್ದಾರೆ. ಮೊಬೈಲ್ ಫೋನ್ ಮಾಲೀಕರ ಬರುವಿಕೆಗಾಗಿ, ಸ್ಥಳದಲ್ಲಿಯೇ ಕೆಲ ಸಮಯ ಕಾದು ನಿಂತಿದ್ದಾರೆ. ಯಾರು ಬಾರದ ಕಾರಣದಿಂದ ಮೊಬೈಲ್ ಫೋನ್ ತೆಗೆದುಕೊಂಡು ವಿನೋಬನಗರ ಪೊಲೀಸ್ ಠಾಣೆಗೆ ನೀಡಿದ್ದರು.

ಪೊಲೀಸರು ನೀಡಿದ ಮಾಹಿತಿ ಮೇರೆಗೆ ಮೇ 3 ರ ಬೆಳಿಗ್ಗೆ ಇಂಜಿನಿಯರ್ ಈಶ್ವರಪ್ಪರವರು ಠಾಣೆಗೆ ತೆರಳಿ ಮೊಬೈಲ್ ಫೋನ್ ಪಡೆದುಕೊಂಡಿದ್ದರು. ಜೊತೆಗೆ ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಿ ಪೊಲೀಸ್ ಠಾಣೆಗೆ ಆತನನ್ನು ಕರೆಯಿಸಿ ಶಾಲು ಹೊದಿಸಿ, ಹೂವಿನ ಮಾಲೆ ಹಾಕಿ, ನಗದು ಬಹುಮಾನ ನೀಡಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್, ಪಿಎಸ್ಐ ಸುನೀಲ್ ಬಿ.ಸಿ., ಎಎಸ್ಐ ರಮೇಶ್, ಮುಖ್ಯ ಪೇದೆ ರಾಮಪ್ಪ, ರಾಜಪ್ಪ ಮೊದಲಾದವರಿದ್ದರು.