
ಮುಗಿಲುಮುಟ್ಟಿದ ಪ್ರಚಾರದ ಅಬ್ಬರ : ಮತ ಬೇಟೆ ಜೋರು..!
-ಬಿ.ರೇಣುಕೇಶ್-
ಸಾರ್ವತ್ರಿಕ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಸೋಮವಾರ ಅಂತಿಮ ತೆರೆ ಬೀಳಲಿದ್ದು, ದಿನಗಣನೆ ಆರಂಭವಾಗಿದೆ. ಮತ್ತೊಂದೆಡೆ, ಪ್ರಚಾರ ಕಣ ಸಂಪೂರ್ಣ ರಂಗೇರಿದೆ. ಪ್ರಚಾರದ ಅಬ್ಬರ ಮುಗಿಲುಮುಟ್ಟಿಲಾರಂಭಿಸಿದೆ. ಮತ ಬೇಟೆ ಜೋರಾಗಿದೆ. ಮತದಾರರ ಮನವೊಲಿಕೆಗೆ ಭಾರೀ ಕಸರತ್ತು ನಡೆಸಲಾಗುತ್ತಿದೆ!
ವಿವಿಧ ರಾಜಕೀಯ ಪಕ್ಷಗಳ ನಾಯಕರು ರೋಡ್ ಶೋ, ಮೆರವಣಿಗೆ, ಪಾದಯಾತ್ರೆ, ಸಮಾವೇಶ ಹಾಗೂ ಸಾರ್ವಜನಿಕರ ಸಭೆಗಳ ಮೂಲಕ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಹಾಗೆಯೇ ಆರೋಪ – ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.
ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳು, ಕಾರ್ಯಕರ್ತರು, ಬೆಂಬಲಿಗರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದ್ದಾರೆ. ಮತದಾರರ ಮನವೊಲಿಕೆಗೆ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಮನೆ ಮನೆಗೆ ತೆರಳಿ ಕರಪತ್ರ ವಿತರಣೆ ಮಾಡಲಾಗುತ್ತಿದೆ.
ಇದೆಲ್ಲದರ ನಡುವೆ ವಿವಿಧ ಪಕ್ಷಗಳ ಸ್ಟಾರ್ ಕ್ಯಾಂಪೇನರ್ ಗಳು ಸಮಾವೇಶ, ಸಭೆ, ರೋಡ್ ಶೋ ಪಾದಯಾತ್ರೆಗಳ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.
ಇದರ ಜೊತೆಗೆ ಕೆಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ, ಆಟೋ ಮತ್ತೀತರ ವಾಹನಗಳಲ್ಲಿ ಮೈಕ್ ಮೂಲಕ ಪ್ರಚಾರ ನಡೆಸುತ್ತಿರುವುದು ಕಂಡುಬರುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಬ್ಬರ: ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಚುನಾವಣಾ ಪ್ರಚಾರದ ಅಬ್ಬರ ಮತ್ತಷ್ಟು ಜೋರಾಗಿದೆ. ಪಕ್ಷ, ಅಭ್ಯರ್ಥಿಗಳು, ತತ್ವ-ಸಿದ್ದಾಂತಗಳ ಪರವಾದ ಹಾಗೂ ಎದುರಾಳಿ ಪಕ್ಷ, ನಾಯಕರಿಗೆ ಸಂಬಂಧಿಸಿದಂತೆ ಟೀಕೆ-ಟಿಪ್ಪಣಿಗಳು ಸೇರಿದಂತೆ ನಾನಾ ರಾಜಕೀಯ ವಿಷಯಗಳ ಕುರಿತಾದ ಫೋಟೋ-ವೀಡಿಯೋಗಳು ಭಾರೀ ದೊಡ್ಡ ಸಂಖ್ಯೆಯಲ್ಲಿ ಹರಿದಾಡುತ್ತಿವೆ.
ಒಟ್ಟಾರೆ ಮತದಾರರ ಗಮನ ಸೆಳೆಯಲು ಚುನಾವಣಾ ಕಣದಲ್ಲಿ ಭಾರೀ ಹೈಡ್ರಾಮಾಗಳೇ ನಡೆಯುತ್ತಿವೆ. ಪ್ರಚಾರ ಕಣದಲ್ಲಿ ದಿನಕ್ಕೊಂದು ತಿರುವುಗಳು ಕಂಡುಬರುತ್ತಿವೆ. ಆದರೆ ಮತದಾರ ಪ್ರಭುವಿನ ಚಿತ್ತ ಯಾರತ್ತ ಎಂಬುವುದು ಸಂಪೂರ್ಣ ನಿಗೂಢವಾಗಿರುವುದಂತೂ ಸತ್ಯ!