
ಹಿಂಸಾಪೀಡಿತ ಮಣಿಪುರದಲ್ಲಿದ್ದ ಕರ್ನಾಟಕದ ನಾಲ್ವರು ವಿದ್ಯಾರ್ಥಿಗಳಿಗೆ ನೆರವಿನಹಸ್ತ!
ವಿಶೇಷ ವರದಿ : ಬಿ.ರೇಣುಕೇಶ್
ಬೆಂಗಳೂರು/ಶಿವಮೊಗ್ಗ, ಮೇ 8: ದಿಢೀರ್ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಿಂದ, ಮಣಿಪುರ ರಾಜ್ಯ ಅಕ್ಷರಶಃ ನುಲುಗಿ ಹೋಗಿದೆ. ಈ ನಡುವೆ ಮಣಿಪುರ ರಾಜ್ಯದಲ್ಲಿ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಕರ್ನಾಟಕ ರಾಜ್ಯದ ನಾಲ್ವರು ವಿದ್ಯಾರ್ಥಿಗಳನ್ನು, ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ನಡೆಸಲಾರಂಭಿಸಿದೆ.
ಇದರಲ್ಲಿ ಶಿವಮೊಗ್ಗ ನಗರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಿಬ್ಬಂದಿ ತಿಪ್ಪೇಸ್ವಾಮಿ ಅವರ ಪುತ್ರ ಮನೋಜ್ ಹಾಗೂ ತೀರ್ಥಹಳ್ಳಿ ತಾಲೂಕು ಕೋಣಂದೂರು ನಿವಾಸಿ, ಮಾಜಿ ಗ್ರಾಪಂ ಅಧ್ಯಕ್ಷರಾದ ವಿಶಾಲ ಪ್ರಫುಲ್ಲಚಂದ್ರ ಅವರ ಪುತ್ರಿ ಅಪ್ಸರ ಕೆ.ಪಿ. ಕೂಡ ಸೇರಿದ್ದಾರೆ. ಇವರಿಬ್ಬರು ಮಣಿಪುರದ ಇಂಫಾಲ ಅಗ್ರಿಕಲ್ಚರ್ ಯೂನಿವರ್ಸಿಟಿ ಕಾಲೇಜ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಉಳಿದಂತೆ ಚಿಕ್ಕಮಗಳೂರು ಹಾಗೂ ಬಾಗಲಕೋಟೆ ಜಮಖಂಡಿಯ ಇಬ್ಬರು ವಿದ್ಯಾರ್ಥಿಗಳು ಎನ್.ಐ.ಟಿ. ಕಾಲೇಜೊಂದರಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ ಈ ನಾಲ್ವರು ವಿದ್ಯಾರ್ಥಿಗಳು ಮಣಿಪುರ ರಾಜ್ಯದ ಇಂಫಾಲ ವಿಮಾನ ನಿಲ್ದಾಣದಿಂದ, ಅಸ್ಸಾಂ ರಾಜ್ಯದ ಗೌಹಾತಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರಾತ್ರಿ ಹಿಂದಿರುಗುತ್ತಿದ್ದಾರೆ.
ನೆರವಿನಹಸ್ತ: ಸೋಮವಾರ ‘ಉದಯ ಸಾಕ್ಷಿ’ ನ್ಯೂಸ್ ವೆಬ್’ಸೈಟ್ ಜೊತೆ ಮೊಬೈಲ್ ಫೋನ್ ಮೂಲಕ ಅಪ್ಸರ ಕೆ.ಪಿ. ಅವರು ಮಾತನಾಡಿ, ‘ಕಳೆದ ಕೆಲ ದಿನಗಳ ಹಿಂದೆ ಕಾಲೇಜ್ ಹಾಸ್ಟೆಲ್ ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಹಿಂಸಾಚಾರ ನಡೆಯುತ್ತಿತ್ತು. ಆತಂಕದ ವಾತಾವರಣ ನೆಲೆಸಿತ್ತು. ಇತರೆ ರಾಜ್ಯಗಳು ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಲಾರಂಭಿಸಿದ್ದವು. ನಾವುಗಳು ರಾಜ್ಯಕ್ಕೆ ಹಿಂದಿರುಗುವುದು ಹೇಗೆಂಬುವುದೇ ತಿಳಿಯದಾಗಿತ್ತು.
ತಮ್ಮ ತಾಯಿ ವಿಶಾಲ ಪ್ರಫುಲ್ಲಚಂದ್ರ ಅವರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಗಮನಕ್ಕೆ ಈ ವಿಷಯ ತಂದಿದ್ದರು. ಅವರ ಮೂಲಕ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಸಂರ್ಪಕಿಸಿದ್ದರು. ತದನಂತರ ರಾಜ್ಯದ ಅಧಿಕಾರಿಗಳು, ತಮ್ಮ ಮೊಬೈಲ್ ಗೆ ನಿರಂತರವಾಗಿ ಕರೆ ಮಾಡಿ ಸಂಪರ್ಕದಲ್ಲಿದ್ದರು.
ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮೀಷನರ್ ಮನೋಜ್ ರಾಜನ್ ಅವರಿಂದ ಸಾಕಷ್ಟು ನೆರವಿನಹಸ್ತ ದೊರಕಿತು. ಕಾಲೇಜ್ ಕ್ಯಾಂಪಸ್ ನಿಂದ ಸೋಮವಾರ ಬೆಳಿಗ್ಗೆ ಪೊಲೀಸ್ ಭದ್ರತೆಯಲ್ಲಿ ನಮ್ಮನ್ನು ಸ್ಥಳೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ವಿಶೇಷ ವಿಮಾನದಲ್ಲಿ ಅಸ್ಸಾಂನ ಗೌಹಾತಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದೆವೆ. ಇಲ್ಲಂದ ಸಂಜೆ ನಾವು ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದೆವೆ. ವಿಮಾನ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಅಧಿಕಾರಿಗಳೇ ಭರಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ತಾವು ತಂಗಿದ್ದ ಕಾಲೇಜ್ ಹಾಸ್ಟೆಲ್ ಸುತ್ತಮುತ್ತ ಭಾರೀ ಪ್ರಮಾಣದ ಹಿಂಸಾಚಾರ ನಡೆಯುತ್ತಿತ್ತು. ಹಾಸ್ಟೆಲ್ ಸಮೀಪದ ಜನವಸತಿ ಪ್ರದೇಶಗಳಲ್ಲಿಯೂ ಗಲಭೆ ಆಗುತ್ತಿತ್ತು. ಭಯದ ವಾತಾವರಣ ಮನೆಮಾಡಿತ್ತು. ಇಲ್ಲಿಂದ ಕರ್ನಾಟಕ ರಾಜ್ಯಕ್ಕೆ ವಾಪಾಸ್ಸಾಗುವುದು ಹೇಗೆಂಬ ಚಿಂತೆ ತಮ್ಮದಾಗಿತ್ತು.
ಈ ನಡುವೆ ನಮ್ಮಗಳ ಸಂಪರ್ಕಕ್ಕೆ ಸಿಕ್ಕಿದ ಕರ್ನಾಟಕದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮೀಷನರ್ ಮನೋಜ್ ರಾಜನ್ ಅವರಿಂದ ಸಾಕಷ್ಟು ನೆರವಿನಹಸ್ತ ದೊರಕಿತು. ನಿರಂತರವಾಗಿ ಅವರು ತಮ್ಮೊಂದಿಗೆ ಸಂಪರ್ಕದಲ್ಲಿದ್ದರು. ನಮ್ಮನ್ನು ಸುರಕ್ಷಿತವಾಗಿ ಕರೆತರುವ ಸಕಲ ವ್ಯವಸ್ಥೆಗಳನ್ನು ಮಾಡಿದ್ದರು. ಬೆಂಗಳೂರು ವಿಮಾನ ನಿಲ್ದಾಣದಿಂದ ನಮ್ಮ ಮನೆಗಳಿಗೆ ಹಿಂದಿರುಗಲು ಬಸ್ ವ್ಯವಸ್ಥೆಯೂ ಕೂಡ ಆಗಿದೆ. ಮನೋಜ್ ರಾಜನ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ’ ಶಿವಮೊಗ್ಗದ ವಿದ್ಯಾರ್ಥಿ ಮನೋಜ್ ಅವರು ‘ಉದಯ ಸಾಕ್ಷಿ’ ನ್ಯೂಸ್ ವೆಬ್’ಸೈಟ್ ಗೆ ಮಾಹಿತಿ ನೀಡಿದ್ದಾರೆ.
ಕಮೀಷನರ್ ಮನೋಜ್ ರಾಜನ್ ಜನಪರ ಕಾರ್ಯನಿರ್ವಹಣೆ
*** ದೇಶ ಮಾತ್ರವಲ್ಲದೆ ಹೊರದೇಶಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಮರಳಿ ರಾಜ್ಯಕ್ಕೆ ಕರೆತರುವಲ್ಲಿ, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮೀಷನರ್ ಮನೋಜ್ ರಾಜನ್ ಅವರ ಸಕಾಲಿಕ ಕ್ರಮ ಹಾಗೂ ದಕ್ಷ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಸುಡಾನ್ ದೇಶದಲ್ಲಿ ಸಿಲುಕಿಬಿದಿದ್ದ ನೂರಾರು ಕನ್ನಡಿಗರು ಸುರಕ್ಷಿತವಾಗಿ ಅವರ ಮನೆಗಳಿಗೆ ಕಳುಹಿಸಿ ಕೊಡುವ ಕಾರ್ಯದಲ್ಲಿ ಮನೋಜ್ ರಾಜನ್ ಅವರ ಪಾತ್ರ ಅತ್ಯಂತ ಮಹತ್ತರವಾದುದಾಗಿತ್ತು. ಈ ಹಿಂದೆ ಉಕ್ರೇನ್ ದೇಶದಲ್ಲಿದ್ದ ಕನ್ನಡಿಗ ವಿದ್ಯಾರ್ಥಿಗಳನ್ನು ಕೂಡ ರಾಜ್ಯಕ್ಕೆ ಕರೆತರುವಲ್ಲಿ ಮನೋಜ್ ರಾಜನ್ ಅವರು ಪ್ರಮುಖ ಪಾತ್ರವಹಿಸಿದ್ದರು.

ಇದೀಗ ಮಣಿಪುರ ರಾಜ್ಯದಲ್ಲಿ ವಿದ್ಯಾಭ್ಯಾಸಕ್ಕೆಂದು ತೆರಳಿ ವಾಪಾಸ್ ಕರ್ನಾಟಕಕ್ಕೆ ಹಿಂದಿರುಗಲು ನೆರವಿನಹಸ್ತ ಕೇಳಿದ್ದ ಶಿವಮೊಗ್ಗ ಜಿಲ್ಲೆಯ ಇಬ್ಬರು ಸೇರಿದಂತೆ ರಾಜ್ಯದ ನಾಲ್ವರು ವಿದ್ಯಾರ್ಥಿಗಳಿಗೆ, ಕಮೀಷನರ್ ಮನೋಜ್ ರಾಜನ್ ಅವರು ವಿಶೇಷ ಆಸಕ್ತಿವಹಿಸಿ ರಾಜ್ಯಕ್ಕೆ ಕರೆತರುವ ಕಾರ್ಯ ನಡೆಸಿದ್ದಾರೆ. ಮನೋಜ್ ರಾಜನ್ ಅವರ ಸಕಾಲಿಕ ನೆರವಿನಹಸ್ತಕ್ಕೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.