
ಮದುವೆ ಮನೆಯಲ್ಲಿ ಮತದಾನ ಜಾಗೃತಿ!
ಶಿವಮೊಗ್ಗ, ಮೇ 8: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಮತದಾನ ಜಾಗೃತಿ ನಡೆಯುತ್ತಿದ್ದು, ಮದುವೆ ಮನೆಯೊಂದರಲ್ಲಿ ಸಮನ್ವಯ ಟ್ರಸ್ಟ್ ಸದಸ್ಯರು ಮತದಾನ ಮಾಡುವಂತೆ ಮದುವೆಗೆ ಆಗಮಿಸಿದ್ದವರಿಗೆ ಜಾಗೃತಿ ಮೂಡಿಸಿದರು.
ಶಿವಮೊಗ್ಗ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ ಅವರ ಪುತ್ರಿ ದಾಮಿನಿ ಟಿ.ಕೆ. ಹಾಗೂ ಶಿಕಾರಿಪುರದ ಡಾ. ಹೇಮಂತ್ಕುಮಾರ್ ಅವರ ವಿವಾಹವು ಭಾನುವಾರ ಜರುಗಿತು.
ಇದೇ ಸಂದರ್ಭದಲ್ಲಿ ಸಮನ್ವಯ ಟ್ರಸ್ಟ್ ಪದಾಧಿಕಾರಿಗಳು ಮತದಾನ ಮಹತ್ವದ ಬಗ್ಗೆ ತಿಳಿಸಿದರು. ಮತದಾನದ ಗುರುತೀನ ಚೀಟಿ ಹೊಂದಿರುವ ಪ್ರತಿಯೊಬ್ಬರು ಬುಧವಾರ ಮೇ 10 ರಂದು ತಪ್ಪದೇ ಮತದಾನ ಮಾಡಬೇಕು.
ನನ್ನ ಮತ ಮಾರಾಟಕ್ಕಿಲ್ಲ ಎಂಬ ಘೋಷ ವಾಕ್ಯದ ಬಗ್ಗೆಯು ಜಾಗೃತಿ ಮೂಡಿಸಲಾಯಿತು. ಮತದಾನ ನಮ್ಮೆಲ್ಲರ ಹಕ್ಕು, ಮತ ಚಲಾಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮತದಾನ ಜಾಗೃತಿ ಮಾಡಲಾಯಿತು.
ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರಿಗೆ ಮತದಾನ ಮಾಡುವಂತೆ, ಮತದಾನ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.
ಮತದಾನದ ದಿನ ಬೆಳಗ್ಗೆ ತಪ್ಪದೇ ಮತ ಚಲಾಯಿಸುವಂತೆ “ನಾವು ಮತ ಚಲಾಯಿಸೋಣ” ಅಭಿಯಾನ ನಡೆಸಲಾಯಿತು.
ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.