
ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಹಾಜರು : ಇಬ್ಬರು ಸಸ್ಪೆಂಡ್!
ಶಿವಮೊಗ್ಗ, ಮೇ 9: ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಇಬ್ಬರು ಸಿಬ್ಬಂದಿಗಳು, ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ, ಆರೋಪಿತ ನೌಕರರನ್ನು ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.
ಭದ್ರಾವತಿ ತಾಲೂಕು ಬಿ.ಆರ್.ಪಿ. ತೋಟಗಾರಿಕೆ ಕ್ಷೇತ್ರದ ಸಹಾಯಕ ತೋಟಗಾರಿಕೆ ನೌಕರ ಬಿ.ರಮೇಶ್ ಹಾಗೂ ಸೊರಬ ತಾಲೂಕು ಹುರುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾದ ಮಾಲತೇಶ್ ಎನ್ ಅಮಾನತ್ತುಗೊಂಡವರೆಂದು ಗುರುತಿಸಲಾಗಿದೆ.
ಇವರಿಬ್ಬರು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆ ಸಿಬ್ಬಂದಿಯಾಗಿ ಕಾರ್ಯನಿರ್ವಹಣೆಗೆ ನಿಯೋಜನೆಯಾಗಿದ್ದರು. ಮಂಗಳವಾರ ಬೆಳಿಗ್ಗೆ ಶಿವಮೊಗ್ಗದ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದ ವೇಳೆ ಮದ್ಯಪಾನ ಮಾಡಿದ್ದು ಕಂಡುಬಂದಿತ್ತು.
ಇವರಿಬ್ಬರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಮದ್ಯಪಾನ ಮಾಡಿದ್ದು ದೃಢಪಟ್ಟಿತ್ತು. ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ, ಇವರಿಬ್ಬರನ್ನು ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ಧಾರೆ.