
ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ
ಶಿವಮೊಗ್ಗ, ಮೇ 10: ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಕ್ಕೆ ಬುಧವಾರ ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳಲ್ಲಿ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು. ಬಿಸಿಲ ಬೇಗೆಯ ನಡುವೆಯೂ ಮತಗಟ್ಟೆಗಳಲ್ಲಿ ಸರದಿ ಸಾಲಿನಲ್ಲಿ ನಿಂತು, ಅತ್ಯಂತ ಉತ್ಸಾಹದಿಂದ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ, ಕೆಲ ಸಮಯ ಮತದಾನ ಕಾರ್ಯ ಸ್ಥಗಿತಗೊಂಡಿದ್ದ ವರದಿಗಳು ಹೊರತುಪಡಿಸಿದರೆ, ಉಳಿದಂತೆ ಯಾವುದೇ ಅಹಿತಕರ ಘಟನೆ ಹಾಗೂ ಗೊಂದಲ-ಗಡಿಬಿಡಿಯಿಲ್ಲದೆ ಮತದಾನ ಪ್ರಕ್ರಿಯೆ ನಡೆಯಿತು.

ಕೆಲವೆಡೆ ಸಂಜೆ ವೇಳೆ ಬಿದ್ದ ಮಳೆಯು, ಮತದಾನಕ್ಕೆ ತೀವ್ರ ಅಡೆತಡೆ ಉಂಟು ಮಾಡಿತು. ಉಳಿದಂತೆ ಮತದಾನ ಪೂರ್ಣಕ್ಕೆ ನಿಗದಿತ ಸಮಯವಾದ 6 ಗಂಟೆಯೊಳಗೆ ಮತಗಟ್ಟೆಯೊಳಗೆ ಆಗಮಿಸಿದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸುತ್ತಿದ್ದುದು ಹಲವೆಡೆ ಕಂಡುಬಂದಿತು.
ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ನಗರ-ಪಟ್ಟಣ ಪ್ರದೇಶಗಳಲ್ಲಿ ಬೆಳಿಗ್ಗೆ ವೇಳೆ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದರೆ, ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನದ ಸಮಯದಲ್ಲಿ ವ್ಯಾಪಕ ಪ್ರತಿಕ್ರಿಯೆ ಕಂಡುಬಂದಿತು.
ವಿಕಲಚೇತನರು, ವಯೋವೃದ್ಧರು, ಇದೇ ಮೊದಲ ಬಾರಿಗೆ ಮತ ಹಾಕುತ್ತಿರುವವರು ಸೇರಿದಂತೆ ಎಲ್ಲ ವರ್ಗದವರು ಅತ್ಯಂತ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದುದು ಕಂಡುಬಂದಿತು.

ಮತಗಟ್ಟೆಗಳಲ್ಲಿ ಮತದಾರರು ಕುಳಿತುಕೊಳ್ಳಲು ಕುರ್ಚಿ, ಬೆಂಚ್ ಗಳ ವ್ಯವಸ್ಥೆ ಮಾಡಲಾಗಿತ್ತು. ಉಳಿದಂತೆ ಕುಡಿಯುವ ನೀರು, ಶಾಮಿಯಾನ, ವಿಕಲಚೇತನರಿಗೆ ವ್ಹೀಲ್ ಚೇರ್ ಸೌಲಭ್ಯ ಕಲ್ಪಿಸಲಾಗಿತ್ತು.
ಭದ್ರತೆ: ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸರ ಜೊತೆಗೆ, ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಸಿಬ್ಬಂದಿಗಳ ನಿಯೋಜನೆ: ಜಿಲ್ಲೆಯಲ್ಲಿ 1782 ಮತಗಟ್ಟೆಗಳನ್ನು ಮತದಾನಕ್ಕೆ ತೆರೆಯಲಾಗಿತ್ತು. 2050 ಪಿಆರ್’ಓ, 2050 ಎಪಿಆರ್’ಓ, 4100 ಪಿಓ ಸೇರಿದಂತೆ ಒಟ್ಟು 8200 ಮತಗಟ್ಟೆ ಸಿಬ್ಬಂದಿಗಳನ್ನು ಮತದಾನ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು. ಇದರ ಜೊತೆಗೆ 83 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿತ್ತು.
ಪ್ರಮುಖರ ಮತದಾನ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕೆ.ಎಸ್.ಈಶ್ವರಪ್ಪ, ಡಿ.ಹೆಚ್.ಶಂಕರಮೂರ್ತಿ ಸೇರಿದಂತೆ ಹಾಲಿ – ಮಾಜಿ ಜನಪ್ರತಿನಿಧಿಗಳು, ಮುಖಂಡರು, ಚುನಾವಣಾ ಕಣಕ್ಕಿಳಿದ ಅಭ್ಯರ್ಥಿಗಳು ವಿವಿಧೆಡೆ ತಮ್ಮ ಹಕ್ಕು ಚಲಾಯಿಸಿದರು.
ಕೆಲ ಮತಗಟ್ಟೆಗಳಲ್ಲಿ ವಿಳಂಬಗತಿ ಮತದಾನ : ಮಾರುದ್ದದ ಸರತಿ ಸಾಲು!
*** ಶಿವಮೊಗ್ಗ ಜಿಲ್ಲೆಯ ಕೆಲ ಮತಗಟ್ಟೆಗಳಲ್ಲಿ ವಿಳಂಬಗತಿಯಲ್ಲಿ ಮತದಾನ ಪ್ರಕ್ರಿಯೆ ನಡೆದ ದೂರುಗಳು ಮತದಾರರ ವಲಯದಿಂದ ಕೇಳಿಬಂದಿದೆ. ಈ ಕಾರಣದಿಂದ ಹಲವು ಮತಗಟ್ಟೆಗಳ ಬಳಿ ಮಾರುದ್ದದ ಸರದಿ ಸಾಲು ಕಂಡುಬಂದಿತು. ಗಂಟೆಗಟ್ಟಲೆ ಕಾದು ನಿಂತು ಮತದಾನ ಮಾಡುವಂತಾಗಿತ್ತು ಎಂದು ಮತದಾರರು ಹೇಳಿದ್ದಾರೆ. ಮತದಾರರ ಸಂಖ್ಯೆ ಹೆಚ್ಚಿದ್ದು, ಒಂದೇ ಮತಗಟ್ಟೆ ಸ್ಥಾಪನೆಯಾಗಿದ್ದ ಸ್ಥಳಗಳಲ್ಲಿ ವಿಳಂಬಗತಿಯ ಮತದಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ