
ಖಾಸಗಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಸಾವು – 10 ಜನರಿಗೆ ಗಾಯ!
ಶಿವಮೊಗ್ಗ, ಮೇ 11: ಶಿವಮೊಗ್ಗ ತಾಲೂಕಿನ ಚೋರಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಹಳೇ ಸೇತುವೆ ತಿರುವಿನ ಬಳಿ, ಗುರುವಾರ ಸಂಜೆ ಎರಡು ಖಾಸಗಿ ಪ್ರಯಾಣಿಕ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಪ್ರಾಥಮಿಕ ಹಂತದ ಮಾಹಿತಿ ಅನುಸಾರ, ಇಬ್ಬರು ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದಂತೆ ಸುಮಾರು 5 ರಿಂದ 6 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗದಿಂದ ಶಿಕಾರಿಪುರದೆಡೆಗೆ ತೆರಳುತ್ತಿದ್ದ ಹಾಗೂ ಶಿಕಾರಿಪುರದಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದ ಬಸ್ ಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡು ಬಸ್ ಗಳ ಮುಂಭಾಗ ಸಂಪೂರ್ಣ ನುಜ್ಜಗಜ್ಜಾಗಿದೆ.
ಬಸ್ ಗಳಲ್ಲಿ ಸಿಲುಕಿ ಬಿದ್ದಿದ್ದ ಪ್ರಯಾಣಿಕರನ್ನು ಸ್ಥಳೀಯ ಗ್ರಾಮಸ್ಥರು ಆಂಬ್ಯುಲೆನ್ಸ್ ಸೇರಿದಂತೆ ಮತ್ತೀತರ ವಾಹನಗಳ ಮೂಲಕ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.

ಅಪಘಾತದಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಎರಡು ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕಾಗಮಿಸಿದ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
