
ಶಿವಮೊಗ್ಗ ಜಿಲ್ಲೆ : ಕಾಂಗ್ರೆಸ್ 3, ಬಿಜೆಪಿ 3, ಜೆಡಿಎಸ್ 1!
-ಬಿ. ರೇಣುಕೇಶ್-
ಶಿವಮೊಗ್ಗ, ಮೇ 13: ಬಿಜೆಪಿ ಭದ್ರಕೋಟೆಯೆಂದೇ ಬಿಂಬಿತವಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ, ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಭಾರೀ ಪೈಪೋಟಿ ನೀಡುವ ಮೂಲಕ ಸಮಬಲದ ಸಾಧನೆ ಮಾಡಿ ಗಮನ ಸೆಳೆದಿದೆ!
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 3, ಕಾಂಗ್ರೆಸ್ 3 ಹಾಗೂ ಜೆಡಿಎಸ್ 1 ಕಡೆ ಜಯ ಸಾಧಿಸಿದೆ. ಕಳೆದ 2018 ರ ಚುನಾವಣೆಯಲ್ಲಿ 6 ಕಡೆ ಜಯ ಸಾಧಿಸಿ ಪ್ರಾಬಲ್ಯ ಮೆರೆದಿದ್ದ ಬಿಜೆಪಿ ಪಕ್ಷ ಈ ಬಾರಿ ಮೂರು ಕಡೆ ಪರಾಭವಗೊಂಡು ಕೈ ಸುಟ್ಟುಕೊಂಡಿದೆ.
ಶಿವಮೊಗ್ಗ ನಗರ, ಶಿಕಾರಿಪುರ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿ ಜಯ ಸಾಧಿಸಿದೆ. ಕಾಂಗ್ರೆಸ್ ಪಕ್ಷವು ಕಳೆದ ಬಾರಿ ಜಯ ಸಾಧಿಸಿದ್ದ ಭದ್ರಾವತಿ ಜೊತೆಗೆ ಬಿಜೆಪಿ ವಶದಲ್ಲಿದ್ದ ಸಾಗರ ಹಾಗೂ ಸೊರಬ ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಸಫಲವಾಗಿದೆ.
ಉಳಿದಂತೆ ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೂನ್ಯ ಸಂಪಾದನೆ ಸಾಧಿಸಿದ್ದ ಜೆಡಿಎಸ್ ಪಕ್ಷವು ಈ ಬಾರಿ, ಬಿಜೆಪಿ ವಶದಲ್ಲಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ.
ಸೋಲು-ಗೆಲುವು: ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದ ನಾಲ್ವರು ಹಾಲಿ ಶಾಸಕರಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ ಕೆ.ಬಿ.ಅಶೋಕನಾಯ್ಕ್, ಸಾಗರದಲ್ಲಿ ಹರತಾಳು ಹಾಲಪ್ಪ, ಸೊರಬದಲ್ಲಿ ಕುಮಾರ್ ಬಂಗಾರಪ್ಪ ಪರಾಭವಗೊಂಡಿದ್ದಾರೆ. ತೀರ್ಥಹಳ್ಳಿಯಿಂದ ಕಣಕ್ಕಿಳಿದಿದ್ದ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಜಯ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದಂತೆ ಆ ಪಕ್ಷದಿಂದ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಬಿ.ವೈ.ವಿಜಯೇಂದ್ರ (ಶಿಕಾರಿಪುರ) ಹಾಗೂ ಚನ್ನಬಸಪ್ಪ (ಶಿವಮೊಗ್ಗ) ಜಯ ಸಂಪಾದಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ್ (ಭದ್ರಾವತಿ) ಮತ್ತೆ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಈ ಹಿಂದೆ ಶಾಸಕರಾಗಿ ನಂತರದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬೇಳೂರು ಗೋಪಾಲಕೃಷ್ಣ (ಸಾಗರ), ಮಧು ಬಂಗಾರಪ್ಪ (ಸೊರಬ) ಅವರು ಈ ಬಾರಿ ಜಯ ಸಂಪಾದಿಸಿದ್ದಾರೆ.
2018 ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಜೆಡಿಎಸ್ ಪಕ್ಷವು ಈ ಬಾರಿ ಶಿವಮೊಗ್ಗ ಗ್ರಾಮಾಂತರ (ಶಾರದಾ ಪೂರ್ಯನಾಯ್ಕ್) ದಲ್ಲಿ ಜಯ ಸಾಧಿಸಿದೆ. ಹಾಗೆಯೇ ಭದ್ರಾವತಿ ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಅವರು ಭಾರೀ ಪೈಪೋಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಒಟ್ಟಾರೆ ಬಿಜೆಪಿ ಭದ್ರಕೋಟೆ ಬೇಧಿಸುವಲ್ಲಿ ಎದುರಾಳಿ (ಕಾಂಗ್ರೆಸ್ – ಜೆಡಿಎಸ್) ಗಳು ಅರ್ಧದಷ್ಟು ಯಶವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ರಾಜಕಾರಣ ಸಾಕಷ್ಟು ಕುತೂಹಲ ಕೆರಳಿಸುವುದಂತೂ ನಿಶ್ಚಿತವಾಗಿದೆ!