
ಭದ್ರಾವತಿ : ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ್ ಗೆ ಪ್ರಯಾಸದ ಗೆಲುವು!
*ಭಾರೀ ಪೈಪೋಟಿ ನೀಡಿದ ಜೆಡಿಎಸ್ ಅಭ್ಯರ್ಥಿ!!
-ಬಿ.ರೇಣುಕೇಶ್-
ಭದ್ರಾವತಿ, ಮೇ 13: ಭದ್ರಾವತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು, ಟಿ-20 ಕ್ರಿಕೆಟ್ ಪಂದ್ಯಾವಳಿಯಷ್ಟೇ ರೋಚಕತೆ ಕೆರಳಿಸಿತ್ತು. ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಕ್ಷೇತ್ರದಲ್ಲಿ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಅಲ್ಪ ಮತಗಳ ಅಂತರದಲ್ಲಿ ಜಯದ ನಗೆ ಬೀರಿದ್ದಾರೆ!
ಆದರೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಮತಗಳಿಕೆಯಲ್ಲಿ ಭಾರೀ ಪೈಪೋಟಿ ನೀಡಿದ್ದಾರೆ. ಕೆಲವೇ ಸಾವಿರ ಮತಗಳ ಅಂತರದಲ್ಲಿ ಅವರ ಕೈಯಿಂದ ಜಯದ ಮಾಲೆ ಕೈ ತಪ್ಪಿದೆ. ಉಳಿದಂತೆ ಕ್ಷೇತ್ರದಲ್ಲಿ ಬಿಜೆಪಿ ಪರಾಭವ ಮುಂದುವರಿದಿದೆ. ಆದರೆ ಆ ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ. ಅಭ್ಯರ್ಥಿ ಮಂಗೋಟೆ ರುದ್ರೇಶ್ ಮೊದಲ ಪ್ರಯತ್ನದಲ್ಲಿ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ.
ವಿಜೇತ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ್ ಅವರು 65,883 ಮತ ಗಳಿಸಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಶಾರದಾ ಅಪ್ಪಾಜಿ ಅವರ ಮತಗಳಿಕೆ 63,298 ಆಗಿದೆ. ಬಿ.ಕೆ.ಸಂಗಮೇಶ್ವರ್ ಅವರು 2,585 ಮತಗಳ ಅಂತರದಲ್ಲಿ ವಿಜಯ ಗೆರೆ ದಾಟಿದ್ದಾರೆ. ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡ ಬಿಜೆಪಿ ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಅವರಿಗೆ 21,137 ಮತ ಚಲಾವಣೆಯಾಗಿದೆ.
ಲೆಕ್ಕಾಚಾರ: ಕಳೆದ ಹಲವು ದಶಕಗಳಿಂದ ಬಿ.ಕೆ.ಸಂಗಮೇಶ್ ಹಾಗೂ ಅಪ್ಪಾಜಿಗೌಡ ಅವರ ನಡುವೆ ನೇರ ಹಣಾಹಣಿಗೆ ಕ್ಷೇತ್ರ ಸಾಕ್ಷಿಯಾಗುತ್ತ ಬಂದಿದೆ. ಆದರೆ ಕೊರೊನಾ ಸೋಂಕಿನಿಂದ ಅಪ್ಪಾಜಿಗೌಡ ಅವರು ನಿಧನರಾದ ಹಿನ್ನೆಲೆಯಲ್ಲಿ, ಪ್ರಸ್ತುತ ಚುನಾವಣೆಯಲ್ಲಿ ಜೆಡಿಎಸ್ ನಿಂದ ಅವರ ಪತ್ನಿ ಶಾರದ ಅಪ್ಪಾಜಿ ಅವರು ಅಖಾಡಕ್ಕಿಳಿದಿದ್ದರು.
ಅನುಕಂಪದ ಅಲೆ, ಬಿಜೆಪಿಯಿಂದ ಪ್ರಬಲ ಜಾತಿಗೆ ಸೇರಿದ ಅಭ್ಯರ್ಥಿ ಕಣಕ್ಕಿಳಿದಿದ್ದು, ಜಾತಿಯಾಧರಿತ ಮತಗಳಿಕೆ ಲೆಕ್ಕಾಚಾರ, ಶಾಸಕರ ವಿರೋಧಿ ಮತಗಳು ಮತ್ತೀತರ ಕೆಲ ಸ್ಥಳೀಯ ಕಾರಣಗಳಿಂದ ಶಾರದಾ ಅಪ್ಪಾಜಿ ಅವರ ಗೆಲುವು ಸುಲಭವೆಂದೇ ವಿಶ್ಲೇಷಿಸಲಾಗಿತ್ತು.
ಮತ್ತೊಂದೆಡೆ, ಬಿ.ಕೆ.ಸಂಗಮೇಶ್ವರ್ ಅವರು ಪ್ರಸ್ತುತ ಚುನಾವಣೆಯಲ್ಲಿ ಜಯಗಳಿಸಲು ಭಾರೀ ಕಸರತ್ತು ನಡೆಸಿದ್ದರು. ನಾನಾ ರೀತಿಯ ತಂತ್ರಗಾರಿಕೆ ನಡೆಸಿದ್ದರು. ‘ಮತಗಳಿಕೆ’ಗೆ ಅಗತ್ಯವಾದ ಎಲ್ಲ ರೀತಿಯ ಗುಪ್ತ ಕಾರ್ಯತಂತ್ರ ನಡೆಸಿದ್ದರು.
ಇದೆಲ್ಲದರ ನಡುವೆ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಅವರು ಕೂಡ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದರು. ಮತದಾನಕ್ಕೂ ಪೂರ್ವದಲ್ಲಿ ತ್ರಿಕೋನ ಹಣಾಹಣಿ ಏರ್ಪಡುವ ಲೆಕ್ಕಾಚಾರಗಳು ಕಂಡುಬಂದಿದ್ದವು.
ಆದರೆ ಮತದಾನೋತ್ತರ ಲೆಕ್ಕಾಚಾರದಲ್ಲಿ ಕಾಂಗ್ರೆಸ್ – ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಯಾರಿಗೆ ಜಯ ದೊರಕಲಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಂತಾಗಿತ್ತು. ನಿರೀಕ್ಷಿಸಿದಂತೆ ಮತಗಳಿಕೆಯಲ್ಲಿ ಎರಡು ಪಕ್ಷಗಳು ಭಾರೀ ಪೈಪೋಟಿ ನಡೆಸಿರುವುದು ಕಂಡುಬರುತ್ತದೆ. ಆದರೆ ಜಯದ ಮಾಲೆ ಕಾಂಗ್ರೆಸ್ ಪಾಲಾಗಿದೆ.