
ಶಿವಮೊಗ್ಗ ಗ್ರಾಮಾಂತರ : ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್’ಗೆ ಒಲಿದ ವಿಜಯದ ಮಾಲೆ!
-ಬಿ.ರೇಣುಕೇಶ್-
ಶಿವಮೊಗ್ಗ, ಮೇ 13: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಜಿದ್ಧಾಜಿದ್ದಿನ ಹಣಾಹಣಿ ಏರ್ಪಟ್ಟಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ, ಕೊನೆಗೂ ಜೆಡಿಎಸ್ ಪಕ್ಷ ಜಯಭೇರಿ ಬಾರಿಸಿದೆ. ಕ್ಷೇತ್ರ ಉಳಿಸಿಕೊಳ್ಳಲು ಭಾರೀ ಕಸರತ್ತು ನಡೆಸಿದ್ದ ಬಿಜೆಪಿ ಯತ್ನಗಳು ವಿಫಲವಾಗಿವೆ. ಇನ್ನೊಂದೆಡೆ, ಕ್ಷೇತ್ರದಲ್ಲಿ ಕಾಂಗ್ರೆಸ್ ನ ನೀರಸ ಪ್ರದರ್ಶನ ಮುಂದುವರಿದಿದೆ!
ಕಳೆದ ನಾಲ್ಕು ಚುನಾವಣೆಗಳಿಂದ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುತ್ತಿರುವ ಶಾರದಾ ಪೂರ್ಯನಾಯ್ಕ್ ಅವರು, ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಹಾಲಿ ಶಾಸಕ ಕೆ.ಬಿ.ಅಶೋಕನಾಯ್ಕ್ ಅವರನ್ನು ಪರಾಭವಗೊಳಿಸುವಲ್ಲಿ ಸಫಲರಾಗಿದ್ದಾರೆ.
ವಿಜೇತ ಶಾರದಾ ಪೂರ್ಯನಾಯ್ಕ್ ಅವರು 86,340 ಮತ ಗಳಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕೆ.ಬಿ.ಅಶೋಕನಾಯ್ಕ್ ಅವರಿಗೆ 71,198 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಶ್ರೀನಿವಾಸ್ ಕರಿಯಣ್ಣ ಅವರು18,335 ಮತಗಳಿಸಲಷ್ಟೇ ಶಕ್ತರಾಗಿದ್ದಾರೆ.
ಲೆಕ್ಕಾಚಾರ: ಕ್ಷೇತ್ರದ ಶಾಸಕರಾಗಿದ್ದ ಕೆ.ಬಿ.ಅಶೋಕನಾಯ್ಕ್ ಅವರು ಮತ್ತೇ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಭಾರೀ ಕಸರತ್ತು ನಡೆಸಿದ್ದರು. ತಮ್ಮದೆ ಆದ ರಾಜಕೀಯ ತಂತ್ರಗಾರಿಕೆ ನಡೆಸಿದ್ದರು. ಚುನಾವಣೆಯಲ್ಲಿ ಭಾರೀ ಹೋರಾಟ ನಡೆಸಿದ್ದರು. ಜೊತೆಗೆ ಬಿಜೆಪಿ ಪರವಾಗಿ ಪ್ರಧಾನಮಂತ್ರಿ ಸೇರಿದಂತೆ ಪ್ರಮುಖ ನಾಯಕರು ಪ್ರಚಾರ ಕೂಡ ನಡೆಸಿದ್ದರು!
ಇದೆಲ್ಲದರ ನಡುವೆ, ನಾನಾ ಕಾರಣಗಳಿಂದ ಕೆಲ ವರ್ಗಗಳ ವಿರೋಧ ಕೂಡ ಕಟ್ಟಿಕೊಂಡಿದ್ದರು. ಚುನಾವಣೆ ಸಮೀಪದಲ್ಲಿ ಎದುರಾದ ಒಳ ಮೀಸಲಾತಿ ಗದ್ದಲವು ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿತ್ತು. ಪ್ರಸ್ತುತ ಅವರ ಮತಗಳಿಕೆ ಪ್ರಮಾಣ ಗಮನಿಸಿದರೆ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಮತ್ತೊಂದೆಡೆ, ಶಾರದಾ ಪೂರ್ಯನಾಯ್ಕ್ ಅವರು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು ಜನ ಸಂಪರ್ಕದಿಂದ ದೂರವಾಗಿರಲಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಹೆಸರು ಉಳಿಸಿಕೊಂಡು ಬರುವ ಕಾರ್ಯ ನಡೆಸಿದ್ದರು. ಅವರು ಅಪಘಾತದಿಂದ ಗಾಯಗೊಂಡಿದ್ದು ಸೇರಿದಂತೆ ಹಲವು ಕಾರಣಗಳಿಂದ ಅವರ ಪರ ಕ್ಷೇತ್ರದಲ್ಲಿ ಅನುಕಂಪದ ಅಲೆ ಕಂಡುಬಂದಿತ್ತು.
ಸೋಲು-ಗೆಲುವು: ಚುನಾವಣಾ ವೇಳೆ ಮತಗಳಿಕೆಗೆ ಬಿಜೆಪಿ ನಡೆಸಿದ ತಂತ್ರಗಾರಿಕೆಯನ್ನು ಜೆಡಿಎಸ್ ಪಕ್ಷ ಅಷ್ಟೇ ಪರಿಣಾಮಕಾರಿಯಾಗಿ ನಡೆಸಿತ್ತು. ಪಕ್ಷದ ಸಂಘಟನೆಯ ಕೊರತೆಯ ಹೊರತಾಗಿಯೂ ಜೆಡಿಎಸ್ ಪಕ್ಷ ಶಾರದಾ ಪೂರ್ಯನಾಯ್ಕ್ ಅವರ ಜನಪ್ರಿಯತೆಯ ಮೇಲೆ ಜಯಭೇರಿ ಬಾರಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ.!
*** ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದೆ. ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ, ಪ್ರಸ್ತುತ ಎಲೆಕ್ಷನ್ ಸೇರಿದಂತೆ 4 ಚುನಾವಣೆಗಳು ನಡೆದಿವೆ. ಆದರೆ ಒಮ್ಮೆ ಆಯ್ಕೆಯಾದವರು ಮತ್ತೊಮ್ಮೆ ಈ ಕ್ಷೇತ್ರದಿಂದ ಆಯ್ಕೆಯಾಗಿಲ್ಲ. ಯಾರೊಬ್ಬರು ಸತತ ಜಯ ಸಂಪಾದಿಸಲ್ಲ ಎಂಬ ಪ್ರತೀತಿಯಿದೆ. ಶಾರದಾ ಪೂರ್ಯನಾಯ್ಕ್ ಅವರು ನಾಲ್ಕು ಬಾರಿ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ಒಮ್ಮೆ ಸೋಲು, ಮತ್ತೊಮ್ಮೆ ಗೆಲುವು, ಮತ್ತೆ ಸೋಲು, ಮತ್ತೇ ಗೆಲುವು ಸಂಪಾದಿಸಿದ್ದಾರೆ! ಕಳೆದ ಬಾರಿ ಆಯ್ಕೆಯಾಗಿದ್ದ ಹಾಲಿ ಶಾಸಕ ಕೆ.ಬಿ.ಅಶೋಕನಾಯ್ಕ್ ಅವರು ಎರಡನೇ ಬಾರಿ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ.