
ಶಿವಮೊಗ್ಗ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರಲ್ಲಿ ಯಾರಿಗೆ ಮಂತ್ರಿ ಪದವಿಯ ಯೋಗ?
-ಬಿ. ರೇಣುಕೇಶ್–
ಶಿವಮೊಗ್ಗ, ಮೇ 15: ಪ್ರಸ್ತುತ ವಿಧಾನಸಭೆ ಚುನಾವಣೆ ವೇಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಗಮನ ಸೆಳೆದಿದೆ. ಸದ್ಯ ಕಾಂಗ್ರೆಸ್ ನ ಮೂವರು ಶಾಸಕರಲ್ಲಿ, ಯಾರಿಗೆ ‘ಮಂತ್ರಿ ಪದವಿ’ಯ ಯೋಗ ದೊರಕಲಿದೆ? ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.
ಭದ್ರಾವತಿಯಿಂದ ಬಿ.ಕೆ.ಸಂಗಮೇಶ್ವರ್, ಸೊರಬದಿಂದ ಮಧು ಬಂಗಾರಪ್ಪ ಹಾಗೂ ಸಾಗರದಿಂದ ಬೇಳೂರು ಗೋಪಾಲಕೃಷ್ಣ ಅವರು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿ.ಕೆ.ಸಂಗಮೇಶ್ವರ್ ಅವರು, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಮೂರು ಬಾರಿ ಕಾಂಗ್ರೆಸ್ ನಿಂದ ಹಾಗೂ ಒಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಚುನಾಯಿತರಾಗಿದ್ದರು.
ಬೇಳೂರು ಗೋಪಾಲಕೃಷ್ಣ ಅವರು ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಹಿಂದೆ ಎರಡು ಬಾರಿ ಅವರು ಬಿಜೆಪಿಯಿಂದ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾಗಿದ್ದರು. 2018 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅವರು ಇದೀಗ ಆ ಪಕ್ಷದಿಂದಲೇ ಶಾಸಕರಾಗಿ ಆಯ್ಕೆಯಾಗುವಲ್ಲಿ ಸಫಲರಾಗಿದ್ದಾರೆ.
ಉಳಿದಂತೆ ಮಧು ಬಂಗಾರಪ್ಪ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಮ್ಮೆ ಜೆಡಿಎಸ್ ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. ಕಳೆದ ಒಂದು ವರ್ಷದ ಹಿಂದಷ್ಟೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿ ಮತ್ತೇ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರಿಗೆ ಯೋಗ?: ಸದ್ಯ ಹಿರಿತನದ ಆಧಾರದ ಮೇಲೆ ಬಿ.ಕೆ.ಸಂಗಮೇಶ್ವರ್ ಹಾಗೂ ರಾಜಕೀಯ ಕಾರಣಗಳಿಂದ ಮಧು ಬಂಗಾರಪ್ಪ ಅವರ ಹೆಸರುಗಳು ಸಚಿವ ಸ್ಥಾನದ ಮುಂಚೂಣಿಯಲ್ಲಿ ಕೇಳಿಬರಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಕೂಡ ಸಚಿವ ಸ್ಥಾನದ ರೇಸ್ ಗಿಳಿದರೂ ಅಚ್ಚರಿಯಿಲ್ಲ!
ಚುನಾವಣಾ ಪ್ರಚಾರದ ವೇಳೆ ಭದ್ರಾವತಿ ಹಾಗೂ ಸೊರಬ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದ ಕಾಂಗ್ರೆಸ್ ನ ಕೆಲ ನಾಯಕರು, ಈ ಬಾರಿ ನಿಮ್ಮ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸಿಕೊಟ್ಟರೆ ಸಚಿವರನ್ನಾಗಿ ಮಾಡಲಾಗುವುದು ಎಂದು ಮತದಾರರಿಗೆ ಭರವಸೆ ನೀಡಿದ್ದರು. ಇದರಿಂದ ಬಿ.ಕೆ.ಸಂಗಮೇಶ್ವರ್ ಹಾಗೂ ಮಧು ಬಂಗಾರಪ್ಪ ಅವರ ನಡುವೆ ಸಚಿವ ಸ್ಥಾನಕ್ಕೆ ಪೈಪೋಟಿಯಿರುವುದು ಕಂಡುಬರುತ್ತಿದೆ.
ಒಟ್ಟಾರೆ ಶಿವಮೊಗ್ಗ ಜಿಲ್ಲೆಯ ಓರ್ವ ಶಾಸಕರಿಗೆ ಮಾತ್ರ, ಸಚಿವ ಸ್ಥಾನ ದೊರಕುವುದು ನಿಶ್ಚಿತವೆಂದೇ ಹೇಳಲಾಗುತ್ತಿದೆ. ಉಳಿದಿಬ್ಬರು ಶಾಸಕರಿಗೆ ನಿಗಮಮಂಡಳಿಗಳಲ್ಲಿ ಪ್ರಾತಿನಿಧ್ಯ ದೊರಕುವ ಸಾಧ್ಯತೆಗಳಿವೆ. ಈ ಕಾರಣದಿಂದ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ದೊರಕಲಿದೆ? ಎಂಬ ಕುತೂಹಲ ಸ್ಥಳೀಯ ರಾಜಕೀಯ ವಲಯದಲ್ಲಿದೆ.
ಗರಿಗೆದರಿದ ಶಿವಮೊಗ್ಗ ಜಿಲ್ಲೆಯ ‘ಕೈ’ ನಾಯಕರ ಚಟುವಟಿಕೆ!
*** ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿರುವುದು, ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಚಟುವಟಿಕೆ ಗರಿಗೆದರುವಂತೆ ಮಾಡಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ಸರ್ಕಾರಿ ಅಧೀನದ ನಿಗಮ-ಮಂಡಳಿಗಳ ಪ್ರಮುಖ ಹುದ್ದೆಗಳು, ನಾಮ ನಿರ್ದೇಶನ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ಕಾರ್ಯತಂತ್ರ ನಡೆಸಲಾರಂಭಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಯಾರೆಲ್ಲ ಕಾಂಗ್ರೆಸ್ ನಾಯಕರಿಗೆ ‘ಅಧಿಕಾರ ಭಾಗ್ಯ’ ದೊರಕಲಿದೆ ಎಂಬುವುದು ಗೊತ್ತಾಗಬೇಕಾಗಿದೆ.