
ಮುಂಬೈನಲ್ಲಿ ಕ್ರೈಸ್ತ ಸನ್ಯಾಸಿನಿಯಾಗಲು ‘ಕಿಡ್ನ್ಯಾಪ್’ ಕಥೆ ಸೃಷ್ಟಿಸಿದ ಯುವತಿ..!
ಸಿನಿಮೀಯ ಶೈಲಿಯಲ್ಲಿ ಯುವತಿ ಪತ್ತೆ ಹಚ್ಚಿ ಶಿವಮೊಗ್ಗಕ್ಕೆ ಕರೆತಂದ ಪೊಲೀಸರು!
ವರದಿ : ಬಿ.ರೇಣುಕೇಶ್
ಶಿವಮೊಗ್ಗ, ಮೇ 16: ಸಂಪೂರ್ಣ ನಿಗೂಢವಾಗಿ ಪರಿಣಮಿಸಿದ್ದ ಯುವತಿಯ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಮುಂಬೈನಲ್ಲಿ ಕ್ರೈಸ್ತ ಸನ್ಯಾನಿಸಿಯಾಗಲು ಹಾಗೂ ಪೋಷಕರಿಂದ ಹಣ ಪಡೆಯುವ ಉದ್ದೇಶದಿಂದ, ಸ್ವತಃ ಯುವತಿಯೇ ಕಿಡ್ನ್ಯಾಪ್ ಕಥೆ ಸೃಷ್ಟಿಸಿದ್ದು ಬೆಳಕಿಗೆ ಬಂದಿದೆ..!
ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂಬ ದೂರು, ಶಿವಮೊಗ್ಗ ಪೊಲೀಸರ ನಿದ್ದೆಗೆಡಿಸಿತ್ತು ಸಿನಿಮೀಯ ಶೈಲಿಯಲ್ಲಿ, ಕ್ಷಿಪ್ರಗತಿಯಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಇನ್ನೇನು ಹುಬ್ಬಳ್ಳಿಯಿಂದ ಮುಂಬೈಗೆ ಬಸ್ ಏರಲು ಸಿದ್ದವಾಗಿ ನಿಂತಿದ್ದ ಯುವತಿಯನ್ನು ಪತ್ತೆ ಹಚ್ಚಿ ಶಿವಮೊಗ್ಗಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಿಡ್ನ್ಯಾಪ್ ಕಥೆ!: ದಾವಣಗೆರೆ ಜಿಲ್ಲೆಯ ಯುವತಿ ರಂಜಿತಾ (20) ಎಂಬಾಕೆಯೇ ಕಿಡ್ನ್ಯಾಪ್ ಕಥೆಯ ಕೇಂದ್ರಬಿಂಧು. ಇವರು ಶಿವಮೊಗ್ಗ ಖಾಸಗಿ ಕಾಲೇಜ್ ವೊಂದರಲ್ಲಿ ಫಿಸಿಯೋಥೆರಪಿ ತರಬೇತಿ ಪಡೆಯುತ್ತಿದ್ದರು. ಸವಳಂಗ ರಸ್ತೆಯ ಮಹಿಳಾ ಹಾಸ್ಟೆಲ್ ವೊಂದರಲ್ಲಿ ತಂಗಿದ್ದರು.
14-5-2023 ರಂದು ಸಂಜೆ ಹಾಸ್ಟೆಲ್ ನಿಂದ ಹೊರಹೋದ ರಂಜಿತಾ ಮತ್ತೆ ಹಾಸ್ಟೆಲ್ ಗೆ ಹಿಂದಿರುಗಿರಲಿಲ್ಲ. ಯುವತಿಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಈ ನಡುವೆ ಯುವತಿಯ ಮೊಬೈಲ್ ಫೋನ್ ನಿಂದ ಅವರ ತಂದೆಯ ಮೊಬೈಲ್ ಗೆ ಮೆಸೇಜ್ ವೊಂದು ಬಂದಿದ್ದು, ’20 ಲಕ್ಷ ರೂ. ಸಿದ್ದಪಡಿಸಿಟ್ಟುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಮಗಳನ್ನು ಕೊಲ್ಲುವುದಾಗಿ..’ ಬೆದರಿಕೆ ಹಾಕಲಾಗಿತ್ತು.
ಈ ಕುರಿತಂತೆ ಪೋಷಕರು ಜಯನಗರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದರು. ಕಿಡ್ನ್ಯಾಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಎರಡು ವಿಶೇಷ ಪೊಲೀಸ್ ತಂಡಗಳ ರಚನೆ ಮಾಡಿತ್ತು. ಈ ತಂಡಗಳು ಯುವತಿ ಅಭ್ಯಾಸ ನಡೆಸುತ್ತಿದ್ದ ಕಾಲೇಜ್, ಹಾಸ್ಟೆಲ್ ಸೇರಿದಂತೆ ವಿವಿಧೆಡೆ ಮಾಹಿತಿ ಕಲೆ ಹಾಕಿತ್ತು. ಸಮೀಪದ ಕಟ್ಟಡಗಳ ಸಿಸಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿತ್ತು.
ಹಾಗೆಯೇ, ಯುವತಿಯ ಮೊಬೈಲ್ ಫೋನ್ ಟವರ್ ಲೋಕೇಷನ್ ಮತ್ತೀತರ ಮಾಹಿತಿ ಸಂಗ್ರಹಿಸಿತ್ತು. ಮತ್ತೊಂದೆಡೆ, ಯುವತಿಯೇ ಎಟಿಎಂನಿಂದ 5000 ರೂ. ವಿತ್ ಡ್ರಾ ಮಾಡಿದ್ದ ವಿವರ ಕೂಡ ಪೊಲೀಸರಿಗೆ ತಿಳಿದುಬಂದಿತ್ತು. ಪ್ರಾಥಮಿಕ ಹಂತದ ತನಿಖೆ ವೇಳೆಯೇ, ಹಣಕ್ಕಾಗಿ ಯುವತಿಯ ಅಪಹರಣವಾಗಿಲ್ಲ ಎಂಬುವುದರ ಮಾಹಿತಿ ಪೊಲೀಸರಿಗೆ ಸ್ಪಷ್ಟವಾಗಿತ್ತು.
ಮೊಬೈಲ್ ಫೋನ್ ಟವರ್ ಲೋಕೇಷನ್ ಆಧಾರದ ಮೇಲೆ ಯುವತಿಯು, ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದ ವಿವರ ಗೊತ್ತಾಗಿತ್ತು. ತಕ್ಷಣವೇ ಪೊಲೀಸ್ ತಂಡ ಹುಬ್ಬಳ್ಳಿಗೆ ದೌಡಾಯಿಸಿತ್ತು. ವಿ.ಆರ್.ಎಲ್ ಬಸ್ ನಿಲ್ದಾಣದಿಂದ ಮುಂಬೈಗೆ ತೆರಳಲು ಸಿದ್ದವಾಗುತ್ತಿದ್ದ ಯುವತಿಯನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಯುವತಿಯ ಜೊತೆ ಬೇರೆ ಯಾರು ಇಲ್ಲದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.
ಸತ್ಯವೇನು?: ಯುವತಿಯನ್ನು ಶಿವಮೊಗ್ಗಕ್ಕೆ ಕರೆತಂದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತಾನೇ ಸೃಷ್ಟಿಸಿದ ಕಿಡ್ನ್ಯಾಪ್ ಕಥೆಯ ವೃತ್ತಾಂತದ ವಿವರ ಬಾಯ್ಬಿಟ್ಟಿದ್ದಾಳೆ.
ಕ್ರಿಶ್ಚಿಯನ್ ಶಾಲೆಯೊಂದರಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ನಡೆಸಿದ್ದ ಯುವತಿಯು, ಶೇ. 95 ರಷ್ಟು ಅಂಕದೊಂದಿಗೆ ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿದ್ದಳು. ಈ ವೇಳೆ ಕ್ರಿಶ್ಚಿಯನ್ ಧರ್ಮದ ಸನ್ಯಾನಿಸಿಯರ ಸೇವಾ ಕಾರ್ಯದ ಬಗ್ಗೆ ಒಲವು ಬೆಳೆಸಿಕೊಂಡಿದ್ದಳು. ನಂತರ ಶಿವಮೊಗ್ಗದ ಖಾಸಗಿ ಪಿಯು ಕಾಲೇಜ್ ನಲ್ಲಿ ಅಭ್ಯಾಸ ನಡೆಸಿದ್ದ ಯುವತಿಯ, ಶೇ.90 ರಷ್ಟು ಅಂಕದೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣಳಾಗಿದ್ದು, ಮೆಡಿಕಲ್ ಓದಬೇಕೆಂಬ ಆಸೆ ಈಡೇರಿರಲಿಲ್ಲ.
ನಂತರ ಖಾಸಗಿ ಕಾಲೇಜ್ ವೊಂದರಲ್ಲಿ ಪಿಸಿಯೋ ಥೆರಪಿ ಕೋರ್ಸ್ ಗೆ ಸೇರ್ಪಡೆಯಾಗಿ ಅಭ್ಯಾಸ ನಡೆಸುತ್ತಿದ್ದಳು. ಈ ವೇಳೆ ಕೇರಳ ರಾಜ್ಯದ ಕ್ರಿಶ್ಚಿಯನ್ ವಿದ್ಯಾರ್ಥಿನಿಯರ ಸ್ನೇಹ ದೊರಕಿತ್ತು. ಮುಂಬೈನ ಕ್ಯಾಥೋಲಿಕ್ ಚರ್ಚ್ ಗೆ ತೆರಳಿ ಕ್ರಿಶ್ಚಿಯನ್ ಸನ್ಯಾನಿಸಿಯಾಗಿ ಸಮಾಜ ಸೇವೆ ಮಾಡುವ ನಿರ್ಧಾರ ಮಾಡಿದ್ದಳು. ಮುಂಬೈನಲ್ಲಿ ನೆಲೆಸಲು ಹಣದ ಅವಶ್ಯಕತೆಯಿದ್ದ ಕಾರಣದಿಂದ ಕಿಡ್ನ್ಯಾಪ್ ಕಥೆ ಸೃಷ್ಟಿಸಿದ್ದಾಗಿ ಯುವತಿ ಕೌನ್ಸೆಲಿಂಗ್ ನಲ್ಲಿ ತಿಳಿಸಿದ್ದಾಳೆ
ಬಸ್ ಸಿಕ್ಕಿರಲಿಲ್ಲ: ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಯುವತಿಗೆ ಶಿವಮೊಗ್ಗದಿಂದ ನೇರ ಬಸ್ ಸಿಕ್ಕಿರಲಿಲ್ಲ. ಬಸ್ ನಲ್ಲಿ ತೀರ್ಥಹಳ್ಳಿಗೆ ತೆರಳಿ ಅಲ್ಲಿಂದ ಶೃಂಗೇರಿ ತದನಂತರ ಬೆಂಗಳೂರು ತಲುಪಿ, ಹುಬ್ಬಳ್ಳಿಗೆ ಯುವತಿ ಆಗಮಿಸಿದ್ದಳು. ಹುಬ್ಬಳ್ಳಿಯಿಂದ ಬಸ್ ನಲ್ಲಿ ಮುಂಬೈಗೆ ಹೋಗುವ ತಯಾರಿಯಲ್ಲಿದ್ದಳು. ಅಷ್ಟರಲ್ಲಿ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.
‘ಯುವತಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದ ನಂತರ, ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ’ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.