
ಕಂದುರೋಗ (ಬ್ರುಸೆಲೋಸಿಸ್) ದ ವಿರುದ್ಧ ಲಸಿಕೆ ಹಾಕಿಸಿ ಜಾನುವಾರುಗಳ ರಕ್ಷಣೆಗೆ ಪಶು ವೈದ್ಯಕೀಯ ಇಲಾಖೆ ಮನವಿ
ಶಿವಮೊಗ್ಗ, ಮೇ 10: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣದಡಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಕಂದುರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಿವಯೋಗಿ ಬಿ ಯಲಿ ತಿಳಿಸಿದ್ದಾರೆ.
ಕಂದುರೋಗವು ಪ್ರಾಣಿಜನ್ಯರೋಗವಾಗಿದೆ. ರಾಸುಗಳಲ್ಲಿ ಈ ರೋಗದಿಂದ ಗರ್ಭ ಧರಿಸಿದ ಹಸುಗಳು 6 ತಿಂಗಳ ನಂತರ ಕಂದು ಕರು ಹಾಕಬಹುದು. ಅವುಗಳ ಗರ್ಭ ಸ್ರಾವದಿಂದ ಮತ್ತು ಹಸಿ ಹಾಲನ್ನು ಹಾಗೆಯೇ ಉಪಯೋಗಿಸುವುದರಿಂದ, ಸದರಿ ರೋಗವು ಮನುಷ್ಯರಿಗೂ ಹರಡಬಹುದು. ಸದರಿ ರೋಗವು ಮನುಷ್ಯರಿಗೆ ಬಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಲಸಿಕಾ ಕಾರ್ಯಕ್ರಮದಡಿ 4 ರಿಂದ 8 ತಿಂಗಳ ಆಕಳು/ಎಮ್ಮೆಗಳ ಹೆಣ್ಣು ಕರುಗಳಿಗೆ ಲಸಿಕೆ 15-05-2023 ರಿಂದ 30-05-2023 ರವರೆಗೆ ಲಸಿಕೆ ಹಾಕಲಾಗುತ್ತದೆ. 2023-24 ನೇ ಸಾಲಿನಲ್ಲಿವಾರ್ಷಿಕ ಒಟ್ಟು 75,000 ಹೆಣ್ಣು ಕರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಈ ಸುತ್ತಿನಲ್ಲಿ 25,000 ಹೆಣ್ಣು ಕರುಗಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಲಸಿಕಾದಾರರು ತಮ್ಮ ಮನೆ ಬಾಗಿಲಲ್ಲೇ ಕರುಗಳಿಗೆ, ಕಿವಿಯೋಲೆ ಅಳವಡಿಸಿ ನೊಂದಣಿ ಮಾಡಿಕೊಂಡು ಲಸಿಕೆ ಹಾಕುತ್ತಾರೆ. ಪಶು ಪಾಲಕರು ಹೆಣ್ಣು ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಕಂದು ರೋಗ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲೂಕುವಾರು, ಗ್ರಾಮವಾರು ತಯಾರಿಸಲಾಗಿದೆ. ಪಶುಪಾಲನಾ ಇಲಾಖೆ ಅಧಿಕಾರಿ/ಸಿಬ್ಬಂದಿಯನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ಚಿಕಿತ್ಸಾ ಸಂಸ್ಥೆಗಳನ್ನು ಸಂಪರ್ಕಿಸಬೇಕೆಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಿವಯೋಗಿ.ಬಿ.ಯಲಿ ಅವರು ತಿಳಿಸಿದ್ದಾರೆ.