
ಯಾರ ಅಂಕೆಗೂ ಸಿಗದ ಆನ್‌ಲೈನ್ ಜೂಜು : ನಡೆಯುತ್ತಿದೆ ಕೋಟಿ, ಕೋಟಿ ರೂ. ಬೆಟ್ಟಿಂಗ್..!
-ಬಿ.ರೇಣುಕೇಶ್-
ಪ್ರಸ್ತುತ ಆನ್ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆ್ಯಪ್ ಗಳ ಸಂಖ್ಯೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಯಾರ ಅಂಕೆಗೂ ಸಿಗದ ಮಟ್ಟದಲ್ಲಿ, ಆನ್ಲೈನ್ ಜೂಜು ದೊಡ್ಡ ಮಟ್ಟದ ವ್ಯವಹಾರವಾಗಿ ನಡೆಯುತ್ತಿದೆ. ಕೋಟಿ ಕೋಟಿ ರೂ. ಮೊತ್ತದ ಬೆಟ್ಟಿಂಗ್ ನಡೆಯುತ್ತಿದೆ. ಸದ್ಯ ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ವೇಳೆ ಆನ್ಲೈನ್ ಬೆಟ್ಟಿಂಗ್ ಭಾರೀ ಸದ್ದು ಮಾಡಲಾರಂಭಿಸಿದೆ!
ಕ್ರೀಡೆ, ಮನರಂಜನೆ, ಕೌಶಲ್ಯ ಮತ್ತೀತರ ಚಟುವಟಿಕೆಗಳ ಹೆಸರಿನಲ್ಲಿ ಆನ್ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆ್ಯಪ್ ಗಳ ಕಾರ್ಯನಿರ್ವಹಿಸುತ್ತಿವೆ. ಸಾಲುಸಾಲು ದೇಶ – ವಿದೇಶಿ ಆನ್ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆ್ಯಪ್ ಗಳ ಕಾರ್ಯಾಚರಿಸುತ್ತಿವೆ. ಯುವ ಜನಾಂಗ ಮಾತ್ರವಲ್ಲದೆ ಎಲ್ಲ ವಯೋಮಾನ, ವರ್ಗದವರು ಕೂಡ ಆನ್ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆ್ಯಪ್ ಗಳ ದಾಸರಾಗುತ್ತಿದ್ದಾರೆ.
ಎಲ್ಲದಕ್ಕಿಂತ ಮುಖ್ಯವಾಗಿ ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ಆ್ಯಪ್ ಗಳಿಗೆ ಚಲನಚಿತ್ರ ನಟನಟಿಯರು, ಕ್ರಿಕೆಟ್ ಆಟಗಾರರು ಸೇರಿದಂತೆ ಹಲವರು ಪ್ರಚಾರ ರಾಯಭಾರಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಭಾರೀ ದೊಡ್ಡ ಪ್ರಮಾಣದ ಜಾಹೀರಾತುಗಳು ಹರಿದಾಡುತ್ತಿವೆ.
ಮತ್ತೊಂದೆಡೆ, 50-100 ರೂ. ಮೂಲಕ ಕೋಟಿ ಕೋಟಿ ರೂ. ಗೆಲ್ಲಬಹುದೆಂಬ ಪ್ರಚಾರ ನಡೆಸಲಾಗುತ್ತಿದೆ. ಇದೆಲ್ಲದರ ಕಾರಣದಿಂದ ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆ್ಯಪ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಬೆಟ್ಟಿಂಗ್ ಆಪ್ ಗಳು ನೊಂದಣಿಗೆ ಆಧಾರ್, ಪಾನ್ ಕಾರ್ಡ್ ಮತ್ತೀತರ ವಿವರ ನೀಡುವುದನ್ನು ಕಡ್ಡಾಯಗೊಳಿಸಿವೆ.
ಆನ್‌ಲೈನ್ ವೇದಿಕೆಯಲ್ಲಿ ಬಾಜಿ ಕಟ್ಟುವವರು ಕೂಡ ಏರಿಕೆಯಾಗುತ್ತಿದೆ. ಇದರ ಜೊತೆಗೆ ಸೈಬರ್ ಆಧಾರಿತ ವಂಚನೆ, ಅಪರಾಧಗಳು ಏರಿಕೆಯಾಗುತ್ತಿವೆ. ಕಾನೂನಿನ ನೆರಳಿನಲ್ಲಿ ದೊಡ್ಡ ಮಟ್ಟದ ಜೂಜು ನಡೆಯುತ್ತಿದೆ. ಆದರೆ ಆಡಳಿತಗಾರರು, ಕಾನೂನು ಪಾಲಕರು ಏನೂ ಮಾಡಲಾಗದಂತಹ ಸ್ಥಿತಿಯಿದೆ. ಕೈ ಕಟ್ಟಿ ಕೂರುವಂತಾಗಿದೆ!
ನಿಷೇಧಿಸಲಾಗಿತ್ತು: 2021 ಅಕ್ಟೋಬರ್ ನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ – 1963 ಕ್ಕೆ ತಿದ್ದುಪಡಿ ತಂದು, ರಾಜ್ಯದಲ್ಲಿ ಆನ್‌ಲೈನ್ ಜೂಜು ನಿಷೇಧ ಜಾರಿಗೆ ತರಲಾಗಿತ್ತು. ಆನ್‌ಲೈನ್ ನಲ್ಲಿ ಆಡುವ ಪಂದ್ಯಗಳು, ಮೊಬೈಲ್ ಆ್ಯಪ್ ಮೂಲಕ ಆಡುವ ಆಟಗಳು, ಕಂಪ್ಯೂಟರ್, ಇಂಟರ್ ನೆಟ್, ಯಾವುದೇ ಸಂವಹನ ಸಾಧನ ಮೂಲಕ ವರ್ಚುಯಲ್ ವೇದಿಕೆಯಲ್ಲಿ ಆಡುವ ಎಲ್ಲಾ ಗೇಮ್ ಗಳನ್ನು ನಿರ್ಬಂಧಿಸಲಾಗಿತ್ತು.
ಕಾಯ್ದೆಯ ವಿರುದ್ದ ಆನ್‌ಲೈನ್ ಗೇಮಿಂಗ್ ಫೆಡರೇಷನ್ ಸೇರಿದಂತೆ ಕೆಲ ಕಂಪೆನಿಗಳು ಹೈಕೋರ್ಟ್ ಮೊರೆ ಹೋಗಿದ್ದವು. ಸರ್ಕಾರ ಜಾರಿಗೊಳಿಸಿದ್ದ ತಿದ್ದುಪಡಿ ಕಾಯ್ದೆಯನ್ನು ಹೈಕೋರ್ಟ್ ರದ್ಧುಗೊಳಿಸಿತ್ತು. ಆನ್‌ಲೈನ್ ಬೆಟ್ಟಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಹೊಸ ಕಾಯ್ದೆ ತರಲು ಅಡ್ಡಿಯಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು.
ಆರ್ಥಿಕ ನಷ್ಟ: ಇಂದಿಗೂ ಕೂಡ ಓಸಿ, ಇಸ್ಪೀಟ್, ಕ್ಯಾಸಿನೋ ಸೇರಿದಂತೆ ಹಲವು ಜೂಜುಗಳು ಕದ್ದುಮುಚ್ಚಿ ನಡೆಸಲಾಗುತ್ತಿದೆ. ಈ ದಂಧೆಗಳಲ್ಲಿ ಭಾಗಿಯಾಗುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ಇವುಗಳಲ್ಲಿ ನಡೆಯುವ ವ್ಯವಹಾರಕ್ಕಿಂತಲೂ ದೊಡ್ಡ ಜೂಜು ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆ್ಯಪ್ ಗಳಲ್ಲಿ ನಡೆಯುತ್ತಿದೆ.
ವಿದ್ಯಾರ್ಥಿಗಳು, ಹದಿಹರೆಯದವರು, ಯುವಕ – ಯುವತಿಯರು, ಕೂಲಿಕಾರ್ಮಿಕರು, ಶ್ರೀಮಂತ-ಬಡವ ಎಂಬ ಬೇಧವಿಲ್ಲದೆ ಆನ್‌ಲೈನ್ ಜೂಜಾಟದಲ್ಲಿ ಎಲ್ಲ ವರ್ಗದವರು ಆನ್‌ಲೈನ್ ಜೂಜು ವೇದಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ.