
ಯಾರಾಗಲಿದ್ದಾರೆ ಸಿಎಂ..? : ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ನಡುವೆ ಮುಂದುವರಿದ ಹಗ್ಗಜಗ್ಗಾಟ!
*ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದ ಮುಖ್ಯಮಂತ್ರಿ ಆಯ್ಕೆ!!
ದೆಹಲಿ/ಬೆಂಗಳೂರು, ಮೇ 17: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಟಿ-20 ಕ್ರಿಕೆಟ್ ಮ್ಯಾಚ್ ನಷ್ಟೆ ರೋಚಕತೆ ಕೆರಳಿಸಿದೆ. ಕ್ಷಣಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ!
ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ನಿಲುವಿಗೆ ಅಂಟಿಕೊಂಡಿರುವುದು, ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಈಗಾಗಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಜೊತೆ ಪ್ರತ್ಯೇಕವಾಗಿ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಅಭಿಪ್ರಾಯ ಆಲಿಸಿದ್ದಾರೆ. ಜೊತೆಗೆ ಅಧಿಕಾರ ಹಂಚಿಕೆ ಸೂತ್ರಗಳನ್ನು ಮುಂದಿಟ್ಟಿದ್ದಾರೆ.
‘ಮೊದಲ ಅವಧಿಯ ಸಿಎಂ ಹುದ್ದೆ ತಮಗೆ ನೀಡಬೇಕು..’ ಎಂದು ಈ ಇಬ್ಬರೂ ನಾಯಕರು ಪಟ್ಟು ಹಿಡಿದಿದ್ದಾರೆ. ಯಾರೊಬ್ಬರು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಇದು ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸುವಂತೆ ಮಾಡಿದೆ.

ಈ ನಡುವೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಹುದ್ದೆ ತಮಗೆ ನೀಡದಿದ್ದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಹುದ್ದೆಗೆ ನಿಯೋಜಿಸಬೇಕೆಂಬ ದಾಳ ಉರುಳಿಸಿದ್ದಾರೆಂಬ ಮಾತುಗಳು ಕೂಡ ಕೇಳಿಬರಲಾರಂಭಿಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜಿವಾಲ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿಎಂ ಆಯ್ಕೆ ಕುರಿತಂತೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಮುಂದಿನ 48 ರಿಂದ 72 ಗಂಟೆಗಳಲ್ಲಿ ಕರ್ನಾಟಕದಲ್ಲಿ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ’ ಎಂದು ಹೇಳಿದ್ದಾರೆ.
ಸಂಭ್ರಮಾಚಾರಣೆ ನಡೆಸಿದ್ದ ಸಿದ್ದರಾಮಯ್ಯ ಬೆಂಬಲಿಗರು!
*** ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತವೆಂದು ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ, ಬುಧವಾರ ಮಧ್ಯಾಹ್ನ ಸಿದ್ದರಾಮಯ್ಯ ಬೆಂಬಲಿಗರು ಬೆಂಗಳೂರು ಸೇರಿದಂತೆ ಹಲವೆಡೆ ಸಂಭ್ರಮಾಚರಣೆ ನಡೆಸಿದ್ದರು. ಆದರೆ ಸಿಎಂ ಹುದ್ದೆಗೆ ಯಾರನ್ನೂ ಅಧಿಕೃತವಾಗಿ ಆಯ್ಕೆ ಮಾಡಿಲ್ಲ ಎಂಬ ವರದಿಗಳ ನಂತರ, ಬೆಂಬಲಿಗರಲ್ಲಿ ಮನೆ ಮಾಡಿದ್ದ ಸಂಭ್ರಮ ಮರೆಯಾಗಿತ್ತು.