
ಊಟದ ವಿಚಾರಕ್ಕೆ ನಡೆಯಿತು ಡಬ್ಬಲ್ ಮರ್ಡರ್..!
*ದಾವಣಗೆರೆಯಿಂದ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರ ತಂಡ
*ಕ್ಷುಲ್ಲಕ ಕಾರಣಕ್ಕೆ ಇಬ್ಬರ ಕಗ್ಗೊಲೆ!!
ತೀರ್ಥಹಳ್ಳಿ, ಮೇ 18: ತೀರ್ಥಹಳ್ಳಿಯಲ್ಲಿ ನಡೆದ ಕೂಲಿ ಕಾರ್ಮಿಕರಿಬ್ಬರ ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕರಲ್ಲಿ ಉಂಟಾದ ಗಲಾಟೆಯೇ, ಹತ್ಯೆಗೆ ಕಾರಣವಾಗಿರುವ ಅಂಶ ಬೆಳಕಿಗೆ ಬಂದಿದೆ!
ರಾಜಣ್ಣ (58) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಬೀರೇಶ್ (35) ಹಾಗೂ ಮಂಜುನಾಥ್ (46) ಕೊಲೆಗೀಡಾದ ಕೂಲಿ ಕಾರ್ಮಿಕರಾಗಿದ್ದಾರೆ. ಇವರೆಲ್ಲರು ದಾವಣಗೆರೆಯವರಾಗಿದ್ದಾರೆ. ಟೈಲ್ಸ್ ಕೆಲಸ ಮಾಡುವುದಕ್ಕಾಗಿ ತೀರ್ಥಹಳ್ಳಿಗೆ ಆಗಮಿಸಿದ್ದರು.

ಮಲಗಿದ್ದಾಗ ಹತ್ಯೆ!: ತೀರ್ಥಹಳ್ಳಿಯ ಕುರುವಳ್ಳಿ ಸಮೀಪ ವಿಶ್ವಕರ್ಮ ಸಮುದಾಯ ಭವನದ ಕಟ್ಟಡ ಕಾಮಗಾರಿಗೆಂದು ಇವರೆಲ್ಲ ಆಗಮಿಸಿದ್ದರು. ಕಟ್ಟಡದಲ್ಲಿಯೇ ಇವರು ತಂಗಿದ್ದರು. ಆರೋಪಿ ರಾಜಣ್ಣಅಡುಗೆ ಕೂಡ ಮಾಡುತ್ತಿದ್ದ.
ಬುಧವಾರ ಮಧ್ಯಾಹ್ನ ಮಾಡಿದ್ದ ಅಡುಗೆ ಉಳಿದಿತ್ತು. ಜೊತೆಗೆ ಭವನದ ಪಕ್ಕದಲ್ಲಿಯೇ ಕಾರ್ಯಕ್ರಮವೊಂದು ನಡೆದಿದ್ದು, ಅಲ್ಲಿ ಉಳಿದಿದ್ದ ಇಡ್ಲಿಯನ್ನು ಕಾರ್ಮಿಕರಿಗೆ ನೀಡಲಾಗಿತ್ತು. ಈ ಕಾರಣದಿಂದ ರಾತ್ರಿ ಆರೋಪಿ ರಾಜಣ್ಣ ಅಡುಗೆ ಮಾಡಿರಲಿಲ್ಲ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಕೊಲೆಗೀಡಾದ ಬೀರೇಶ್ ಹಾಗೂ ಮಂಜುನಾಥ್ ಆರೋಪಿ ಜೊತೆ ಗಲಾಟೆ ಮಾಡಿದ್ದರು. ಹಲ್ಲೆ ಕೂಡ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಯು, ಮಧ್ಯರಾತ್ರಿ ಸಮುದಾಯ ಭವನದ ಒಳಭಾಗದಲ್ಲಿ ಮಲಗಿದ್ದ ಬೀರೇಶ್ ಹಾಗೂ ಮೇಲ್ಭಾಗದಲ್ಲಿ ನಿದ್ರಿಸುತ್ತಿದ್ದ ಮಂಜುನಾಥ್ ರವರ ತಲೆಗೆ ಪಿಕಾಸಿಯಿಂದ ಒಡೆದು ಕೊಲೆ ಮಾಡಿದ್ದ. ಪೊಲೀಸರ ವಿಚಾರಣೆ ವೇಳೆ ಆರೋಪಿ ಈ ವಿವರ ಬಾಯ್ಬಿಟ್ಟಿದ್ದಾನೆ.
ಬೆಳಿಗ್ಗೆ ಇತರೆ ಕಾರ್ಮಿಕರು ಕೆಲಸಕ್ಕೆಂದು ಸಮುದಾಯ ಭವನಕ್ಕೆ ಆಗಮಿಸಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಎಸ್ಪಿ ಭೇಟಿ: ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಠಾಣೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.