
ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿಯೇ ಶ್ರೀಗಂಧದ ಮರ ಕಡಿತಲೆಗೊಳಿಸಿದ ಕಳ್ಳರು!
*ನಾಗರೀಕರಿಂದ ಬಯಲಿಗೆ ಬಂದ ಪ್ರಕರಣ!!
ಶಿವಮೊಗ್ಗ, ಮೇ 20: ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿಯೇ ಕಳ್ಳರ ತಂಡವೊಂದು, ಶ್ರೀಗಂಧದ ಮರ ಕಡಿತಲೆಗೊಳಿಸಿ ತುಂಡುಗಳ ಸಾಗಾಣೆಗೆ ಯತ್ನಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ಆಲ್ಕೋಳ ಬಡಾವಣೆಯಲ್ಲಿ ನಡೆದಿದೆ.
ಆಲ್ಕೊಳದ ವಿನೋಬನಗರ 100 ಅಡಿ ರಸ್ತೆಯಲ್ಲಿರುವ, ಅರಣ್ಯ ಇಲಾಖೆಯ ವಲಯ ಕಚೇರಿ ಆವರಣದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿಗಳು ಶ್ರೀಗಂಧದ ಮರ ಕಡಿತಲೆಗೊಳಿಸಿ, ಮರದ ತುಂಡುಗಳನ್ನು ಚೀಲದಲ್ಲಿ ತುಂಬಿಕೊಂಡು ಬೈಕ್ ನಲ್ಲಿ ಕೊಂಡೊಯ್ಯುವ ವೇಳೆ, ಸ್ಥಳೀಯ ನಾಗರೀಕರು ಗಮನಿಸಿದ್ದಾರೆ. ತಕ್ಷಣವೇ ಪೊಲಿಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ.
ಮಲ್ಲಿಗೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ಬೈಕ್ ಸ್ಕಿಡ್ ಆಗಿದ್ದು, ಆರೋಪಿಗಳು ಕೆಳಕ್ಕೆ ಬಿದ್ದಿದ್ದಾರೆ. ಈ ಕಾರಣದಿಂದ ಶ್ರೀಗಂಧದ ಚೀಲ, ಬೈಕ್ ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಎಫ್ಐಆರ್: ಆಲ್ಕೋಳ ವಲಯ ಕಚೇರಿ ರೇಂಜರ್ ಸುಧಾಕರ್ ಬಿ ಅವರು ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿಪೋ ಆವರಣದಲ್ಲಿ ಶ್ರೀಗಂಧದ ಮರ ಕಡಿತಲೆಗೊಳಿಸಿ ಅದರ ತುಂಡುಗಳನ್ನು ಕೊಂಡೊಯ್ಯುತ್ತಿದ್ದುದು ಬೆಳಕಿಗೆ ಬಂದಿದೆ. ಈಗಾಗಲೇ ಎಫ್ಐಆರ್ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಕಚೇರಿ ಆವರಣದಲ್ಲಿಯೇ ಕನ್ನ : ಎಚ್ಚೆತ್ತುಕೊಳ್ಳುವುದೆ ಅರಣ್ಯ ಇಲಾಖೆ?
*** ವನ್ಯ ಸಂಪತ್ತು ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿಯೇ, ಅದು ನಗರ ವ್ಯಾಪ್ತಿಯಲ್ಲಿಯೇ ಕಳ್ಳರು ಶ್ರೀಗಂಧದ ಮರಕ್ಕೆ ಕನ್ನ ಹಾಕಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಆಲ್ಕೋಳ ವಲಯ ಕಚೇರಿ ಆವರಣದಲ್ಲಿ ಚಂದನ ವನದ ಪ್ರದೇಶದಲ್ಲಿ ಅಮೂಲ್ಯ ಮರಗಳಿವೆ. ಕಿರು ಅರಣ್ಯದ ರೀತಿ ಬೆಳೆಸಲಾಗಿದೆ. ಈ ಮರಗಳ ಸೂಕ್ತ ಸಂರಕ್ಷಣೆಯನ್ನು ಅರಣ್ಯ ಇಲಾಖೆ ಮಾಡಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.