
ಬಿ.ಕೆ.ಸಂಗಮೇಶ್ವರ್ – ಮಧು ಬಂಗಾರಪ್ಪ ನಡುವೆ ಸಚಿವ ಸ್ಥಾನಕ್ಕೆ ಭಾರೀ ಪೈಪೋಟಿ!
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಒಲವು ಯಾರತ್ತ?
-ಬಿ.ರೇಣುಕೇಶ್-
ಶಿವಮೊಗ್ಗ, ಮೇ 21: ವಿಧಾನಸಭೆ ಅಧಿವೇಶನದ ನಂತರ, ಕಾಂಗ್ರೆಸ್ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಈ ವೇಳೆ ಶಿವಮೊಗ್ಗ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರಲ್ಲಿ, ಓರ್ವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದ್ದು, ಯಾರಿಗೆ ಅವಕಾಶ ದೊರಕಲಿದೆ ಎಂಬ ಕುತೂಹಲ ಮೂಡಿಸಿದೆ!
ಕಾಂಗ್ರೆಸ್ ಮೂಲಗಳ ಅನುಸಾರ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಹಾಗೂ ಸೊರಬ ಶಾಸಕ ಮಧು ಬಂಗಾರಪ್ಪ ಅವರ ನಡುವೆ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಇವರಿಬ್ಬರಲ್ಲಿ ಓರ್ವರಿಗೆ ಮಂತ್ರಿ ಪದವಿ ನಿಶ್ಚಿತ ಎಂದು ಹೇಳಲಾಗುತ್ತಿದೆ.
ಮೇ 20 ರಂದು ನಡೆದ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿಯೇ, ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಮಧು ಬಂಗಾರಪ್ಪ ಅವರಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ 8 ಶಾಸಕರಿಗೆ ಮಾತ್ರ ಸಚಿವರನ್ನಾಗಿ ನೇಮಿಸಲು ನಿರ್ಧರಿಸಿತ್ತು. ಈ ಕಾರಣದಿಂದ ಮಧು ಬಂಗಾರಪ್ಪ ಸಚಿವರಾಗುವ ಅವಕಾಶ ಕೈ ತಪ್ಪುವಂತಾಗಿತ್ತು.
ಈ ಕಾರಣದಿಂದ ಅವರು ಬೇಸರಗೊಂಡು ಪ್ರಮಾಣ ವಚನ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಇದೀಗ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ, ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಮಧು ಬಂಗಾರಪ್ಪ ಅವರಿದ್ದಾರೆ.
ಮತ್ತೊಂದೆಡೆ, ಬಿ.ಕೆ.ಸಂಗಮೇಶ್ವರ್ ಅವರು ಬಹಿರಂಗವಾಗಿಯೇ ಸಚಿವ ಸ್ಥಾನಕ್ಕೆ ಲಾಬಿ ನಡೆಸಲಾರಂಭಿಸಿದ್ದರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತಮಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು. ಈ ಹಿಂದೆ ಪಕ್ಷದ ನಾಯಕರುಗಳು ನೀಡಿದ್ದ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ವರಿಷ್ಠರಿಗೆ ಆಗ್ರಹಿಸಲಾರಂಭಿಸಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರುಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಹಿರಿತನದ ಆಧಾರದ ಮೇಲೆ ತಮಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಲಾರಂಭಿಸಿದ್ದಾರೆ.
‘ಭಿನ್ನ’ ಅಭಿಪ್ರಾಯ!: ಶಿವಮೊಗ್ಗ ಜಿಲ್ಲೆಯಿಂದ ಯಾರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ವಿಷಯದ ಕುರಿತಂತೆ, ಸಿಎಂ – ಡಿಸಿಎಂ ನಡುವೆ ಒಮ್ಮತಾಭಿಪ್ರಾಯ ವ್ಯಕ್ತವಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಬಿ.ಕೆ.ಸಂಗಮೇಶ್ವರ್ ಪರ ಹಾಗೂ ಡಿಸಿಎಂ ಡಿ.ಕೆ.ಶಿವಮಕುಮಾರ್ ಅವರು ಮಧು ಬಂಗಾರಪ್ಪರ ಪರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಸಿಎಂ ಹಾಗೂ ಡಿಸಿಎಂ ತಮ್ಮ ನಿಲುವುಗಳಿಗೆ ಬಲವಾಗಿ ಅಂಟಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ವೇಳೆ, ಬಿ.ಕೆ.ಸಂಗಮೇಶ್ವರ್ ಹಾಗೂ ಮಧು ಬಂಗಾರಪ್ಪ ಅವರಲ್ಲಿ ಯಾರಿಗೆ ಸಚಿವ ಸ್ಥಾನದ ಯೋಗ ದೊರಕಲಿದೆ ಎಂಬುವುದು ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ!