
ಜಲಾವೃತ ಗಂಡಾಂತರ : ಮಳೆಗಾಲ ಆರಂಭಕ್ಕೂ ಮುನ್ನ ಎಚ್ಚೆತ್ತುಕೊಳ್ಳುವರೇ ಜನಪ್ರತಿನಿಧಿಗಳು, ಅಧಿಕಾರಿಗಳು?
-ಬಿ. ರೇಣುಕೇಶ್–
ಶಿವಮೊಗ್ಗ, ಮೇ 22: ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಕಳೆದ ಕೆಲ ವರ್ಷಗಳಿಂದ ಭಾರೀ ಮಳೆಯಾದ ವೇಳೆ, ಶಿವಮೊಗ್ಗ ನಗರ ಹಾಗೂ ಹೊರವಲಯದ ಹಲವು ಬಡಾವಣೆ – ರಸ್ತೆಗಳು ಜಲಾವೃತವಾಗುವುದು ಸರ್ವೇ ಸಾಮಾನ್ಯ ಎಂಬಂತಾಗಿ ಪರಿಣಮಿಸಿದೆ!
ಜಲಾವೃತ ಸಮಸ್ಯೆಗೆ ಹತ್ತು ಹಲವು ಕಾರಣಗಳಿವೆ. ಅವ್ಯವಸ್ಥಿತ ಅಭಿವೃದ್ದಿ ಕಾಮಗಾರಿಗಳು, ಅವೈಜ್ಞಾನಿಕ ನಗರದ ಬೆಳವಣಿಗೆ, ನಗರ ವ್ಯಾಪ್ತಿಯಲ್ಲಿದ್ದ ಕೆರೆಕಟ್ಟೆಗಳು ಕಣ್ಮರೆಯಾಗುತ್ತಿರುವುದು,
ಚರಂಡಿ-ರಾಜಕಾಲುವೆಗಳು ಸುಸ್ಥಿತಿಯಲ್ಲಿಲ್ಲದಿರುವುದು ಹಾಗೂ ಹಲವೆಡೆ ಭಾರೀ ದೊಡ್ಡ ಪ್ರಮಾಣದಲ್ಲಿ ಒತ್ತುವರಿಯಾಗಿರುವುದು, ಆಡಳಿತದ ನಿರ್ಲಕ್ಷ್ಯ ಸೇರಿದಂತೆ ಹಲವು ಅಂಶಗಳು ಜಲಾವೃತ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.
ಭಾರೀ ಮಳೆಯಾದಗಲ್ಲೆಲ್ಲ ಜಲಾವೃತ ಸ್ಥಿತಿ ತಲೆದೋರುತ್ತಿದ್ದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆಯ ಮೂಲ ಕಾರಣ ಪತ್ತೆ ಹಚ್ಚಿ ಪರಿಹಾರ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಗಮನ ಹರಿಸದಿರುವುದರಿಂದ ವರ್ಷದಿಂದ ವರ್ಷಕ್ಕೆ ಸಮಸ್ಯೆ ಉಲ್ಬಣಿಸುವಂತಾಗಿದೆ.
‘ಕೆರೆ, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲಾಗುವುದು. ಚರಂಡಿಗಳ ಸ್ವಚ್ಚತೆಗೆ ಕ್ರಮಕೈಗೊಳ್ಳಲಾಗುವುದು. ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಗುವುದು. ಜಲಾವೃತ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು…’ ಎಂದು ಆಡಳಿತಗಾರರು ಸಿದ್ದ ಉತ್ತರಗಳ ಭರವಸೆ ನೀಡುತ್ತಾರೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಪ್ರಾಮಾಣಿಕ ಕ್ರಮಗಳು ಆಗುತ್ತಿಲ್ಲ.
ಇದರಿಂದ ನಗರದ ಪ್ರತಿಷ್ಠಿತ ಬಡಾವಣೆಗಳು ಕೂಡ ಜಲಾವೃತ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಬೀಳುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ದೂರುತ್ತಾರೆ.
ಅಗತ್ಯವಿದೆ ಪ್ರತ್ಯೇಕ ಕಾರ್ಯಪಡೆ!
ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಆಡಳಿತ ಹಾಗೂ ಜನಪ್ರತಿನಿಧಿಗಳು ಚಿತ್ತ ಹರಿಸಬೇಕಾಗಿದೆ. ರಾಜಕಾಲುವೆ, ಚರಂಡಿ, ಕೆರೆ, ಜಲಮೂಲ ಪ್ರದೇಶ ಒತ್ತುವರಿ ತೆರವುಗೊಳಿಸಬೇಕು. ಜಲಾವೃತಕ್ಕೀಡಾಗುವ ಸ್ಥಳಗಳನ್ನು ಗುರುತಿಸಿ, ಕಾರಣ ಪತ್ತೆ ಹಚ್ಚಿ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ರಾಜಕಾಲುವೆ, ಚರಂಡಿಗಳನ್ನು ಸುವ್ಯವಸ್ಥಿತವಾಗಿಡುವ ಕಾರ್ಯ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕಾರ್ಯಪಡೆಯೊಂದನ್ನು ರಚಿಸಬೇಕಾಗಿದೆ.