
ರೈಲ್ವೆ ಎಂಜಿನ್ – ಬೋಗಿಗಳ ನಡುವೆ ತಪ್ಪಿದ ಸಂಪರ್ಕ..! ಬೋಗಿಗಳನ್ನೇ ಬಿಟ್ಟು ಮುಂದಕ್ಕೆ ಚಲಿಸಿದ ರೈಲ್ವೆ ಎಂಜಿನ್..!!
ಶಿವಮೊಗ್ಗ, ಮೇ 26: ರೈಲ್ವೆ ಎಂಜಿನ್ ಹಾಗೂ ಬೋಗಿಗಳ ನಡುವಿನ ಸಂಪರ್ಕ ತಪ್ಪಿದ ಪರಿಣಾಮ, ಬೋಗಿಗಳನ್ನೇ ಬಿಟ್ಟು ಎಂಜಿನ್ ಮುಂದಕ್ಕೆ ಚಲಿಸಿದ ವಿಲಕ್ಷಣ ಘಟನೆ, ಭದ್ರಾವತಿ ತಾಲೂಕು ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಸಮೀಪದ ಬಿಳಕಿ ಪ್ರದೇಶದ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು, ಎಂಜಿನ್ – ಬೋಗಿಗಳ ನಡುವೆ ಸಂಪರ್ಕ ಕಳೆದುಕೊಂಡ ರೈಲಾಗಿದೆ. ಈ ಘಟನೆಯಿಂದ ಕೆಲ ಸಮಯ ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು.
ತಾಳಗುಪ್ಪದಿಂದ ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಸದರಿ ರೈಲು, ಬೆಳಿಗ್ಗೆ 7 ಗಂಟೆ 5 ನಿಮಿಷಕ್ಕೆ ಭದ್ರಾವತಿ ನಿಲ್ದಾಣದತ್ತ ಪ್ರಯಾಣ ಬೆಳೆಸಿತ್ತು.
ಬಿಳಕಿ ಸಮೀಪ ಏಕಾಏಕಿ ರೈಲ್ವೆ ಎಂಜಿನ್ ಬೋಗಿಗಳ ಬಿಟ್ಟು ಮುಂದಕ್ಕೆ ಚಲಿಸಿದೆ. ಕೊಂಚ ದೂರ ಕ್ರಮಿಸಿದ ನಂತರ ಎಂಜಿನ್ ನನ್ನು, ಲೋಕೋ ಪೈಲೆಟ್ ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಭದ್ರಾವತಿ ಹಾಗೂ ಶಿವಮೊಗ್ಗದ ರೈಲ್ವೆ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಎಂಜಿನ್ ಹಾಗೂ ಬೋಗಿ ನಡುವೆ ಸಂಪರ್ಕ ಕಲ್ಪಿಸಿದ್ದಾರೆ.
ನಂತರ ರೈಲು ಭದ್ರಾವತಿಯತ್ತ ಪ್ರಯಾಣ ಬೆಳೆಸಿದೆ. ಭದ್ರಾವತಿ ನಿಲ್ದಾಣದಲ್ಲಿ ಹೆಚ್ಚುವರಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ರೈಲು ಸಂಚಾರ ಆರಂಭಿಸಿದ್ದು, ಕೆಲಸಕಾರ್ಯ ಮತ್ತೀತರ ಉದ್ದೇಶಗಳಿಗೆ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಪಡುವಂತಾಯಿತು.
ಕಾರಣವೇನು?: ಎಂಜಿನ್ – ಬೋಗಿಗಳ ನಡುವೆ ಸಂಪರ್ಕ ತಪ್ಪುವುದು ಅಪರೂಪದಲ್ಲಿ ಅಪರೂಪ. ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಈ ರೀತಿಯ ಘಟನೆಗಳು ಜರುಗುತ್ತವೆ ಎಂದು ರೈಲ್ವೆ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.