
ಸರ್ಕಾರಿ ಸಿಟಿ ಬಸ್ ಓಡಿಸಲು ಕೆ.ಎಸ್.ಆರ್.ಟಿ.ಸಿ. ನಿರ್ಲಕ್ಷ್ಯ : ಡಿಸಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ, ಮೇ 26: ಶಿವಮೊಗ್ಗ ನಗರದಲ್ಲಿ ಸರ್ಕಾರಿ ಸಿಟಿ ಬಸ್’ಗಳ ಸಂಚಾರ ಸಮರ್ಪಕವಾಗಿಲ್ಲ. ನಗರದ ಹೊರವಲಯದ ಪ್ರದೇಶಗಳಿಗೆ ಸಂಚರಿಸುತ್ತಿದ್ದ ಬಸ್ ಗಳ ಸಂಚಾರವನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಸ್ಥಗಿತಗೊಳಿಸಿದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಶೋಷಿತ ಸಮುದಾಯಗಳ ವೇದಿಕೆ ಆರೋಪಿಸಿದೆ.
ಈ ಸಂಬಂಧ ಶುಕ್ರವಾರ ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೆ.ಎಸ್.ಆರ್.ಟಿ.ಸಿ. ವಿರುದ್ದ ಸಂಘಟನೆ ಪ್ರತಿಭಟನೆ ನಡೆಸಿತು. ನಂತರ ಡಿಸಿ ಡಾ.ಆರ್.ಸೆಲ್ವಮಣಿ ಅವರಿಗೆ ಮನವಿ ಪತ್ರ ಅರ್ಪಿಸಿತು.
ಸ್ಥಗಿತ: ಕೆ.ಎಸ್.ಆರ್.ಟಿ.ಸಿ. ಮುಖ್ಯ ಬಸ್ ನಿಲ್ದಾಣದಿಂದ ವಿನೋಬನಗರ ಮಾರ್ಗವಾಗಿ ಸೋಮಿನಕೊಪ್ಪ, ಕೋಟೆಗಂಗೂರು, ಸಿದ್ಲಿಪುರ, ಗೆಜ್ಜೇನಹಳ್ಳಿ, ವಿರುಪಿನಕೊಪ್ಪ ಸೇರಿದಂತೆ ವಿವಿಧ ಬಡಾವಣೆ ಹಾಗೂ ಗ್ರಾಮಗಳಿಗೆ ಸರ್ಕಾರಿ ಸಿಟಿ ಬಸ್ ಗಳನ್ನು ಓಡಿಸಲಾಗುತ್ತಿತ್ತು. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಿತ್ತು.
ಆದರೆ ದಿಢೀರ್ ಆಗಿ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಬಸ್ ಗಳ ಸಂಚಾರ ಸ್ಥಗಿತಗೊಳಿಸಿದೆ. ತಕ್ಷಣವೇ ಬಸ್ ಗಳ ಸಂಚಾರಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಂದು ಸಂಘಟನೆವತಿಯಿಂದ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಮಕ್ಬುಲ್ ಅಹಮದ್, ಜುಬೇರ್ ಅಹಮದ್, ಸಯ್ಯದ್ ಜಬೀರ್, ನಾಗರಾಜ್, ಸಿದ್ದಪ್ಪ, ದಿಲ್ ಶಾದ್, ಸಮೀನಾ, ದಾದಾ ಖಲಂದರ್, ಇರ್ಫಾನ್, ಶಫೀವುಲ್ಲಾ, ಮಹಮ್ಮದ್ ಅಲಿ, ಪುಷ್ಪಲತಾ ಸೇರಿದಂತೆ ಮೊದಲಾದವರಿದ್ದರು.