
ಮಳೆಗಾಲ ಮುನ್ನೆಚ್ಚರಿಕೆ ಕ್ರಮ : ಮುಂದುವರಿದ ಜಿಲ್ಲಾಧಿಕಾರಿಗಳ ಶಿವಮೊಗ್ಗ ಸಿಟಿ ರೌಂಡ್ಸ್..!
ಶಿವಮೊಗ್ಗ, ಮೇ 26: ಮುಂಬರುವ ಮಳೆಗಾಲದ ವೇಳೆ ಜಲಾವೃತ ಸಮಸ್ಯೆ ಎದುರಾಗದಂತೆ ಸೂಕ್ತ ಪರಿಹಾರ ಕ್ರಮಕೈಗೊಳ್ಳುವ ಉದ್ದೇಶದಿಂದ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಶಿವಮೊಗ್ಗ ನಗರದಲ್ಲಿ ನಡೆಸುತ್ತಿರುವ ಪರಿಶೀಲನಾ ಕಾರ್ಯ ಮುಂದುವರಿದಿದೆ.
ಶುಕ್ರವಾರ ಕೂಡ ನಗರದ ವಿವಿಧ ಪ್ರದೇಶಗಳಿಗೆ ಡಿಸಿ ಭೇಟಿ ನೀಡಿದ್ದರು. ಮಳೆಯಿಂದ ಸಮಸ್ಯೆ ಎದುರಿಸಬಹುದಾದ ಪ್ರದೇಶಗಳನ್ನು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.
ಪಾಲಿಕೆ ವ್ಯಾಪ್ತಿಯ ಎಲ್‍ಬಿಎಸ್ ನಗರದ ಚಾನಲ್‍ಗೆ ಭೇಟಿ ನೀಡಿ, ಚಾನಲ್‍ನಲ್ಲಿರುವ ಗಿಡಗಂಟಿ, ಕಸ ತೆಗೆಸಬೇಕು. ಇಲ್ಲವಾದಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ನೀರು ಹೊರಗೆ ನುಗ್ಗುವ ಸಂಭವವಿದ್ದು, ನೀರು ಸರಾಗವಾಗಿ ಹರಿಯಲು ಅನುವಾಗುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.
ಶರಾವತಿ ನಗರ ಚಾನಲ್ ಬಳಿ ಭೇಟಿ ನೀಡಿ, ಚರಂಡಿ ಕೊಳಚೆ ನೀರನ್ನು ಚಾನಲ್‍ಗೆ ಬಿಡದಂತೆ ಕ್ರಮ ವಹಿಸಬೇಕೆಂದು ತಿಳಿಸಿದ ಅವರು ನಗರದ ಹೊರ ವಲಯದ ಗೋಪಿಶೆಟ್ಟಿಕೊಪ್ಪದ ಚಾನೆಲ್ ತಿರುವಿನಲ್ಲಿ ನೀರು ರಭಸವಾಗಿ ಹರಿಯುವುದರಿಂದ ಕಳೆದ ಬಾರಿ ಚಾನಲ್ ಏರಿ ಒಡೆದಿತ್ತು. ಈ ಬಾರಿ ಹಾಗಾಗದಂತೆ ರಾಮೇನಕೊಪ್ಪ ಬಳಿಯ ಕಾನೆಹಳ್ಳಕ್ಕೆ ನೀರು ಹರಿಸುವ ಮೂಲಕ ಆ ರಭಸವನ್ನು ಕಡಿಮೆ ಮಾಡಬಹುದೆಂದು ಸಲಹೆ ನೀಡಿದರು.
ದಿ.25 ರಂದು ನಗರದ ಹರಿಗೆ ಚಾನಲ್, ಗುರುಪುರ ಮತ್ತು ವಿದ್ಯಾನಗರದ ರಾಜಾ ಕಾ ಲುವೆ ಗಳ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದ್ದರು. ವಿವಿಧ ನಾಲೆಗಳು, ರಾಜ ಕಾಲುವೆ, ಚಾನಲ್, ಚರಂಡಿಗಳನ್ನು ಪರಿಶೀಲಿಸಿ, ಮಳೆ ಆರಂಭವಾಗುವ ಮುನ್ನ ಕಸ, ಮಣ್ಣು, ಹೂಳು ತೆಗೆಸುವಂತೆ ಹಾಗೂ ಇತರೆ ಪರ್ಯಾಯ ವ್ಯವಸ್ಥೆ ಮಾಡಿ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ಕ್ರಮ ವಹಿಸುವಂತೆ ಸಣ್ಣ ನೀರಾವರಿ ಇಲಾಖೆ, ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.