
‘ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 225 ಮೊಬೈಲ್ ಟವರ್ ಮಂಜೂರು’ : ಸಂಸದ ಬಿ.ವೈ.ರಾಘವೇಂದ್ರ
ಶಿವಮೊಗ್ಗ, ಮೇ 26: ‘ಮಲೆನಾಡು ಭಾಗದಲ್ಲಿ ಮೊಬೈಲ್ ಫೋನ್ ಹಾಗೂ ಇಂಟರ್ನೆಟ್ ಸಂಪರ್ಕ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 4 ಜಿ ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ’ ನೀಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಸಾಗರ ತಾಲೂಕಿಗೆ 89, ಹೊಸನಗರಕ್ಕೆ 35, ತೀರ್ಥಹಳ್ಳಿಗೆ 27, ಶಿವಮೊಗ್ಗಕ್ಕೆ 18, ಶಿಕಾರಿಪುರಕ್ಕೆ 13, ಭದ್ರಾವತಿ ಹಾಗೂ ಸೊರಬ ತಾಲೂಕಿಗೆ ತಲಾ 8 ಮತ್ತು ಬೈಂದೂರು ಕ್ಷೇತ್ರಕ್ಕೆ 25 ಟವರ್ ಗಳು ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲ ಮೂರು ಹಂತಗಳಲ್ಲಿ ಶಿವಮೊಗ್ಗ ಜಿಲ್ಲೆಯ 112 ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ಸ್ಥಾಪನೆಗೆ ಅನುಮತಿ ದೊರಕಿದೆ. ಈಗಾಗಲೇ ಬಿ.ಎಸ್.ಎನ್.ಎಲ್. ಸಂಸ್ಥೆಯು ಟವರ್ ಸ್ಥಾಪನೆಗೆ ಸೂಕ್ತ ಜಾಗಗಳ ಗುರುತಿಸಿದ್ದು, ಭೂ ಮಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.
ಪ್ರತಿ ಟವರ್ ನಿರ್ಮಾಣಕ್ಕೆ 75 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ವೆಚ್ಚವಾಗಲಿದೆ. 225 ಟವರ್ ನಿರ್ಮಾಣಕ್ಕೆ ಸುಮಾರು 200 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರವು ಬಿಎಸ್ಎನ್ಎಲ್ ಮೂಲಕ ಭರಿಸಲಿದೆ ಎಂದು ಹೇಳಿದ್ದಾರೆ.
ಅನುಮತಿ ದೊರಕಿರುವ ಸ್ಥಳಗಳಲ್ಲಿ 2023 ರ ಡಿಸೆಂಬರ್ ಒಳಗೆ ಮೊಬೈಲ್ ಟವರ್ ಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಭಿನಂದನೆ: ಮಲೆನಾಡಿನ ಕುಗ್ರಾಮಗಳಲ್ಲಿ ದೂರ ಸಂಪರ್ಕ ಸುಧಾರಣೆಗೆ ಕ್ರಮಕೈಗೊಳ್ಳುವಂತೆ ಹಾಗೂ ಹೊಸ ಮೊಬೈಲ್ ಟವರ್ ನಿರ್ಮಿಸುವಂತೆ ಈ ಹಿಂದೆ ತಾವು ಮಾಡಿದ್ದ ಮನವಿ ಸ್ಪಂದಿಸಿ, ಭಾರೀ ದೊಡ್ಡ ಸಂಖ್ಯೆಯ ಮೊಬೈಲ್ ಟವರ್ ನಿರ್ಮಣಕ್ಕೆ ಅನುಮತಿ ನೀಡಿದ ಕೇಂದ್ರ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಬಿ.ವೈ.ರಾಘವೇಂದ್ರರವರು ಅಭಿನಂದನೆ ಸಲ್ಲಿಸಿದ್ದಾರೆ.
ಜೊತೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ದೂರ ಸಂಪರ್ಕ ಇಲಾಖೆಯಿಂದ ಮಂಜೂರಾಗಿರುವ ವಿಶೇಷ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ಆಸಕ್ತಿವಹಿಸಿರುವ ಬಿಎಸ್ಎನ್ಎಲ್ ಸಂಸ್ಥೆಯ ದೆಹಲಿಯ ಪ್ರವೀಣ್ ಕುಮಾರ್ ಪುರ್ವರ್, ಬೆಂಗಳೂರಿನ ಜಿ.ಆರ್.ರವಿ, ಶಿವಮೊಗ್ಗದ ಬಿ.ಕೆ.ಸಿನ್ಹಾ, ಮಂಗಳೂರಿನ ನವೀನ್ ಕುಮಾರ್, ಮುರುಗೇಶನ್, ಶಿವಮೊಗ್ಗದ ಕೃಷ್ಣ ಮೊಗೆರಾ ಅವರಿಗೆ ಸಂಸದರು ಇದೇ ವೇಳೆ ಅಭಿನಂದಿಸಿದ್ದಾರೆ.
ಬ್ಲ್ಯಾಕ್ ಸ್ಯಾಚುರೇಷನ್ ಪ್ರಾಜೆಕ್ಟ್ : ಉತ್ತಮ ಕಾರ್ಯನಿರ್ವಹಣೆ
ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಸೇವೆ ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಬ್ಲಾಕ್ ಸ್ಯಾಚುರೇಷನ್ ಪ್ರಾಜೆಕ್ಟ್ ರೂಪಿಸಿದ್ದು, ಪ್ರಾಯೋಗಿಕವಾಗಿ ದೇಶದ ನಾಲ್ಕು ಬ್ಲಾಕ್ ಗಳಲ್ಲಿ ಚಾಲನೆಗೊಳಿಸಿತ್ತು. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕೂಡ ಒಂದಾಗಿತ್ತು. ಸಾಗರ ತಾಲೂಕಿನಲ್ಲಿ ಯೋಜನೆಯ ಪ್ರಾಯೋಗಿಕ ಅನುಷ್ಠಾನವು ಸಂಪೂರ್ಣ ಯಶಸ್ವಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.