
ಶಿವಮೊಗ್ಗ ಸೆಂಟ್ರಲ್ ಜೈಲ್ ಮೇಲೆ ಮತ್ತೆ ಪೊಲೀಸ್ ರೈಡ್..!
ಶಿವಮೊಗ್ಗ, ಮೇ 28: ಶಿವಮೊಗ್ಗ ನಗರದ ಹೊರವಲಯ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹ (ಸೆಂಟ್ರಲ್ ಜೈಲ್) ದ ಮೇಲೆ, ಕಳೆದ ಎಪ್ರಿಲ್ ತಿಂಗಳು ಎಸ್ಪಿ ನೇತೃತ್ವದ ಪೊಲೀಸ್ ತಂಡ ದಿಢೀರ್ ದಾಳಿ ಮಾಡಿ ತಪಾಸಣೆ ನಡೆಸಿತ್ತು.
ಇದೀಗ ಮತ್ತೊಮ್ಮೆ ಸೆಂಟ್ರಲ್ ಜೈಲ್ ಮೇಲೆ, ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಭಾರೀ ದೊಡ್ಡ ಸಂಖ್ಯೆಯ ಪೊಲೀಸ್ ತಂಡ, ಭಾನುವಾರ ಬೆಳಿಗ್ಗೆ ಕಾರಾಗೃಹದ ಪ್ರತಿಯೊಂದು ಸೆಲ್ ತಪಾಸಣೆಗೊಳಪಡಿಸಿದೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಕೆ.ಬಿಂಧುಮಣಿ, ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ವಿವಿಧ ಠಾಣೆಗಳ ಇನ್ಸ್’ಪೆಕ್ಟರ್, ಪಿಎಸ್ಐ ಹಾಗೂ ಸಿಬ್ಬಂದಿಗಳು ತಪಾಸಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕಾರಾಗೃಹದ ಮೇಲೆ ದಾಳಿ ನಡೆಸಿದ ವೇಳೆ ಯಾವೆಲ್ಲ ವಸ್ತುಗಳು ಸಿಕ್ಕಿವೆ? ದಿಢೀರ್ ದಾಳಿ ನಡೆಸಲು ಕಾರಣವಾದ ಅಂಶಗಳೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಆರೋಪಗಳು: ಕೇಂದ್ರ ಕಾರಾಗೃಹದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಇದರ ಜೊತೆಗೆ ಕಳೆದ ತಿಂಗಳು ಜೈಲ್ ನಲ್ಲಿದ್ದ ವಿಚಾರಣಾಧೀನ ಕೈದಿಯೋರ್ವರು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಅನಾರೋಗ್ಯದ ಕಾರಣದಿಂದ ಇವರು ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ ವಿಚಾರಣಾಧೀನ ಕೈದಿಯ ಸಾವಿಗೆ, ಜೈಲ್ ನಲ್ಲಿಯೇ ಕೆಲ ಕೈದಿಗಳು ನಡೆಸಿದ್ದ ಹಲ್ಲೆ ಕಾರಣವಾಗಿದೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದರು.
ಈ ಘಟನೆಯ ಬೆನ್ನಲ್ಲೇ, ಕಾರಾಗೃಹದಲ್ಲಿಯೇ ಮತ್ತೋರ್ವ ವಿಚಾರಣಾಧೀನ ಕೈದಿ ಕಿಟಕಿಯೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಕೂಡ ನಡೆದಿತ್ತು.