
ಭದ್ರಾವತಿ ನಗರದಲ್ಲಿ ಸಾರ್ವಜನಿಕ ಈಜುಕೊಳ ಸ್ಥಾಪನೆಗೆ ಆಗ್ರಹಿಸಿ ಮನವಿ
ಭದ್ರಾವತಿ, ಮೇ 30: ಭದ್ರಾವತಿ ನಗರದಲ್ಲಿ ಸುಸಜ್ಜಿತ ಸಾರ್ವಜನಿಕ ಈಜುಕೊಳ ಸ್ಥಾಪನೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ‘ಇರುವೆ ಟ್ರಸ್ಟ್’ ವತಿಯಿಂದ ಮಂಗಳವಾರ ತಹಶೀಲ್ದಾರ್ ಹಾಗೂ ನಗರಸಭೆ ಆಡಳಿತಕ್ಕೆ ಮನವಿ ಪತ್ರ ಅರ್ಪಿಸಲಾಗಿದೆ.
ಭದ್ರಾವತಿ ತಾಲೂಕಿನಲ್ಲಿ ಭದ್ರಾ ನದಿ, ಭದ್ರಾ ಆಣೆಕಟ್ಟು, ಭದ್ರಾ ನಾಲೆಗಳು ಸೇರಿದಂತೆ ಸಾಕಷ್ಟು ಕೆರೆಕಟ್ಟೆಗಳಿವೆ. ತಾಲೂಕಿನ ಸಾಕಷ್ಟು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಸಮುದಾಯಕ್ಕೆ, ಈಜು ಜನಪ್ರಿಯ ಚಟುವಟಿಕೆಯಾಗಿದೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಎಲ್ಲ ವರ್ಗದವರು ಈಜಿನತ್ತ ಆಕರ್ಷಿಸುತ್ತಿದ್ದಾರೆ.

ಆದರೆ ಭದ್ರಾವತಿ ನಗರದಲ್ಲಿ ವ್ಯವಸ್ಥಿತ ಈಜುಕೊಳವಿಲ್ಲವಾಗಿದೆ. ಇದರಿಂದ ಈಜುವ ಆಸಕ್ತಿ ಹೊಂದಿದವರಿಗೆ ಸಾಕಷ್ಟು ಎಡರುತೊಡರಾಗುವಂತಾಗಿದೆ. ಅದರಲ್ಲಿಯೂ ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿ ಹೊಂದಿರುವ ಯುವಕ – ಯುವತಿಯರು ತೊಂದರೆ ಪಡುವಂತಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಈಜು ಪಟುಗಳು, ಉತ್ಸಾಹಿ ಈಜುಗಾರರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಭದ್ರಾವತಿ ಪಟ್ಟಣದಲ್ಲಿ ಸುಸಜ್ಜಿತವಾದ ಸಾರ್ವಜನಿಕ ಈಜುಕೊಳ ಸ್ಥಾಪನೆಗೆ ಆಡಳಿತ ಕ್ರಮಕೈಗೊಳ್ಳಬೇಕು. ಈ ಮೂಲಕ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಟ್ರಸ್ಟ್ ಆಡಳಿತಕ್ಕೆ ಮನವಿ ಮಾಡಿದೆ.

ಮನವಿ ಅರ್ಪಿಸುವ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಬಿ.ಎಂ.ಶಾಂತಕುಮಾರ್ ಸೇರಿದಂತೆ ಟ್ರಸ್ಟ್ ನ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.