
ಕಡೂರು ರೈಲ್ವೆ ನಿಲ್ದಾಣದಲ್ಲಿಯೇ ಗಂಟೆಗಟ್ಟಲೆ ಸ್ಥಗಿತಗೊಂಡ ಬೆಂಗಳೂರು-ಶಿವಮೊಗ್ಗ ಜನ ಶತಾಬ್ದಿ ರೈಲು!
*ಸಮರ್ಪಕ ಮಾಹಿತಿಯಿಲ್ಲದೆ ಪರದಾಡಿದ ಪ್ರಯಾಣಿಕರು!!
ಶಿವಮೊಗ್ಗ, ಮೇ 30: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಜನ ಶತಾಬ್ದಿ ರೈಲು, ಸರಿಸುಮಾರು ಎರಡು ಗಂಟೆಗಳಿಗೂ ಅಧಿಕ ಸಮಯ ಕಡೂರು ರೈಲ್ವೆ ನಿಲ್ದಾಣದಲ್ಲಿಯೇ ನಿಲುಗಡೆ ಮಾಡದ್ದ ಘಟನೆ, ಮಂಗಳವಾರ ರಾತ್ರಿ ನಡೆದಿದೆ. ಆದರೆ ರೈಲು ನಿಲುಗಡೆ ಮಾಡಿದ್ದು ಏಕೆ? ಎಂಬ ವಿಷಯದ ಕುರಿತಂತೆ, ಸಮರ್ಪಕ ಮಾಹಿತಿಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು!
‘ಕಡೂರು ರೈಲ್ವೆ ನಿಲ್ದಾಣಕ್ಕೆ ಸಂಜೆ 8.30 ರ ಸುಮಾರಿಗೆ ಆಗಮಿಸಿ ನಿಲುಗಡೆಯಾದ ರೈಲು, ರಾತ್ರಿ 10.35 ರ ವೇಳೆಗೆ ಚಾಲನೆಗೊಂಡಿತು. ಗಂಟೆಗಟ್ಟೆಲೆ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲು ಕಾರಣವೇನು ಎಂಬ ವಿಷಯದ ಕುರಿತಂತೆ, ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಕನಿಷ್ಠ ಮಾಹಿತಿ ನೀಡುವ ಕಾರ್ಯವೂ ಆಗಲಿಲ್ಲ. ಪ್ರಕಟಣೆಯೂ ಹೊರಡಿಸಲಿಲ್ಲ’ ಎಂದು ರೈಲಿನಲ್ಲಿ ಪ್ರಯಾಣಿಸುತ್ತಿರುವ ಶಿವಮೊಗ್ಗದ ಪ್ರಯಾಣಿಕರೋರ್ವರು ‘ಉದಯ ಸಾಕ್ಷಿ’ ಗೆ ತಿಳಿಸಿದ್ದಾರೆ.
‘ಬೆಂಗಳೂರಿನಿಂದ ಸಂಜೆ 5.15 ಕ್ಕೆ ಹೊರಟ ಸದರಿ ರೈಲು ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣಕ್ಕೆ ರಾತ್ರಿ 9.40 ಕ್ಕೆ ಆಗಮಿಸಬೇಕಾಗಿತ್ತು. ಕಡೂರು ರೈಲ್ವೆ ನಿಲ್ದಾಣದಲ್ಲಿಯೇ ಸುಮಾರು 2 ಗಂಟೆಗೂ ಅಧಿಕ ಕಾಲ ರೈಲು ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಪಡುವಂತಾಗಿತ್ತು.
ಫ್ಲ್ಯಾಟ್ ಫಾರಂ ಎರಡರಲ್ಲಿ ರೈಲು ನಿಲುಗಡೆ ಮಾಡಲಾಗಿತ್ತು. ಇಲ್ಲಿ ತಿಂಡಿತಿನಿಸು – ಊಟೋಪಚಾರವೂ ಲಭ್ಯವಾಗದಂತಹ ಸ್ಥಿತಿಯಿತ್ತು. ರಾತ್ರಿ 10.35 ರ ಸುಮಾರಿಗೆ ರೈಲು ಕಡೂರು ನಿಲ್ದಾಣದಿಂದ ಶಿವಮೊಗ್ಗದತ್ತ ಸಂಚಾರ ಆರಂಭಿಸಿತು’ ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.
ಕಾರಣವೇನು?: ರೈಲ್ವೆ ಇಲಾಖೆ ಮೂಲಗಳು ಹೇಳುವ ಪ್ರಕಾರ, ಕಡೂರು – ಬೀರೂರು ನಡುವಿನ ಮಾರ್ಗದಲ್ಲಿ ರೈಲ್ವೆ ಎಂಜಿನ್ ವೊಂದು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ. ಈ ಕಾರಣದಿಂದ ಈ ಮಾರ್ಗದಲ್ಲಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುವಂತಾಗಿದೆ ಎಂದು ತಿಳಿಸುತ್ತವೆ.