
ಸಂಚಾರಕ್ಕೆ ಮುಕ್ತವಾಗದ ಫ್ಲೈ ಓವರ್ : ಟ್ರಾಫಿಕ್ ಕಿರಿಕಿರಿಗೆ ವಾಹನ ಸವಾರರು ತತ್ತರ..!
– ಬಿ. ರೇಣುಕೇಶ್ –
ಶಿವಮೊಗ್ಗ, ಮೇ 31: ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣದ ರೈಲ್ವೆ ಗೇಟ್ ಬಳಿ ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಭಾರೀ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಪಡುವಂತಾಗಿದೆ.
ರೈಲುಗಳ ಸಂಚಾರದ ವೇಳೆ, ಗೇಟ್ ಬಂದ್ ಮಾಡಿದ ಸಮಯದಲ್ಲಿ ಟ್ರಾಫಿಕ್ ಕಿರಿಕಿರಿ ತಲೆದೋರುತ್ತಿದೆ. ಎರಡು ಕಡೆಯಿಂದ ನೂರಾರು ವಾಹನಗಳು ಏಕಕಾಲಕ್ಕೆ ನುಗ್ಗುತ್ತವೆ. ಜೊತೆಗೆ ಕೆಲ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಟ್ರಾಫಿಕ್ ಜಾಮ್ ಏರ್ಪಡುತ್ತಿದೆ.
ಸ್ಥಳದಲ್ಲಿ ಟ್ರಾಫಿಕ್ ಪೊಲೀಸರಿದ್ದರೂ ಸುಗಮ ವಾಹನ ಸಂಚಾರ ದುಸ್ತರವಾಗುತ್ತಿದೆ. ಇದರಿಂದ ತುರ್ತು ಕೆಲಸಕಾರ್ಯಗಳಿಗೆ ತೆರಳಬೇಕಾದ ವೇಳೆ, ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ದಟ್ಟಣೆಯಲ್ಲಿ ಸಿಲುಕಿ ಬೀಳುವಂತಾಗುತ್ತದೆ ಎಂದು ಕೆಲ ವಾಹನ ಸವಾರರು ದೂರುತ್ತಾರೆ.
ಸದರಿ ಸ್ಥಳದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ, ಟ್ರಾಫಿಕ್ ಜಾಮ್ ಸರ್ವೇಸಾಮಾನ್ಯ ಎಂಬಂತಾಗಿದೆ. ಸಾಕಷ್ಟು ತೊಂದರೆಯಾಗುತ್ತಿದೆ. ತ್ವರಿತಗತಿಯಲ್ಲಿ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಿ, ಸುಗಮ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು. ರೈಲುಗಳ ಸಂಚಾರದ ವೇಳೆ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಆಗ್ರಹಿಸುತ್ತಾರೆ.
ಸವಳಂಗ ರಸ್ತೆ, ಕಾಶೀಪುರ ರೈಲ್ವೆ ಗೇಟ್ ಬಳಿಯು ಸಂಚಾರ ದುಸ್ತರ!
*** ಶಿವಮೊಗ್ಗದ ಕಾಶೀಪುರ ಹಾಗೂ ಸವಳಂಗ ರಸ್ತೆ ರೈಲ್ವೆ ಗೇಟ್ ಬಳಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಎರಡು ರೈಲ್ವೆ ಗೇಟ್ ಬಳಿಯೂ ವಾಹನಗಳ ಸಂಚಾರ ದುಸ್ತರವಾಗಿದೆ. ರೈಲುಗಳ ಸಂಚಾರದ ವೇಳೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕಿರಿದಾದ ರಸ್ತೆಗಳಲ್ಲಿ, ಸುತ್ತುಬಳಸಿ ವಾಹನಗಳು ಸಂಚರಿಸಬೇಕಾದ ದುಃಸ್ಥಿತಿಯಿದೆ.
ಸಂಸದರ ಸಭೆಯಲ್ಲಿ ರೈಲ್ವೆ ಅಧಿಕಾರಿಗಳು ಹೇಳಿದ್ದೇನು?
*** ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ, ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತಂತೆ ನೈರುತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು. ಈ ವೇಳೆ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣ ಕಾರ್ಯದ ಪ್ರಗತಿಯ ಕುರಿತಂತೆ ಸಂಸದರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.
ಭದ್ರಾವತಿ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಸ್ತುತ ವರ್ಷದ ಡಿಸೆಂಬರ್, ಸವಳಂಗ ರಸ್ತೆಯ ಕಾಮಗಾರಿ ಅಕ್ಟೋಬರ್ ಹಾಗೂ ಕಾಶೀಪುರ ಬಳಿಯ ಮೇಲ್ಸೇತುವೆ ಕಾಮಗಾರಿಯನ್ನು ಜೂನ್ ಒಳಗೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದರು.