
ಗಸ್ತು – ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಹಳ್ಳಿಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ ಯುವ ಪಡೆ..!
ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೊಸ ಪ್ರಯೋಗ
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜೂ. 1: ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಗೆ ಗಸ್ತು ನಿರ್ವಹಣೆಗೆ ನೆರವಾಗಲು ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಪ್ರತಿ ಗ್ರಾಮಗಳಲ್ಲಿ ಆಯ್ದ ಯುವಕರನ್ನೊಳಗೊಂಡ ‘ಯುವ ಪಡೆ’ ರಚನೆಗೆ ಮುಂದಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ರವರೇ ಈ ವಿನೂತನ ‘ಯುವ ಪಡೆ’ ರಚನೆಯ ಸೂತ್ರಧಾರರಾಗಿದ್ದಾರೆ. ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿಸಲು ಹಾಗೂ ಕಾನೂನು-ಸುವ್ಯವಸ್ಥೆಯ ಪರಿಣಾಮಕಾರಿ ನಿರ್ವಹಣೆಗೆ ಈ ಹೊಸ ಕ್ರಮಕ್ಕೆ ಮುಂದಾಗಿದ್ದಾರೆ.
ಎಸ್ಪಿ ಹೇಳಿದ್ದೇನು?: ‘ಹಳ್ಳಿಗಳಲ್ಲಿ 20 ರಿಂದ 30 ಜನರನ್ನೊಳಗೊಂಡ ಯುವಕರ ಪಡೆ ರಚಿಸಲಾಗುವುದು. ಈ ಪಡೆಯು ಗಸ್ತು ನಿರ್ವಹಣೆ ಹಾಗೂ ಗ್ರಾಮಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಮೇ 31 ರಂದು ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಡೇಹಳ್ಳಿ ಗ್ರಾಮದ ಅಶೋಕನಗರದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ಪಡೆಗಳು ಬೀಟ್ ಪೊಲೀಸರೊಂದಿಗೆ ಗಸ್ತು ಮಾಡುವುದು, ಅಕ್ರಮ ಚಟುವಟಿಕೆ ಹಾಗೂ ಇತರೆ ಯಾವುದೇ ಮಾಹಿತಿಗಳಿದ್ದಲ್ಲಿ, ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಲಿದೆ. ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವ ಕಾರ್ಯ ನಡೆಸಲಿದೆ ಎಂದು ಹೇಳಿದ್ದಾರೆ.
ನೇಮಕ: ಜಿಲ್ಲೆಯ ಪ್ರತಿ ಗ್ರಾಮಕ್ಕೆ ಬೀಟ್ ಸಿಬ್ಬಂದಿ ನೇಮಿಸಲಾಗಿದೆ. ನಿಯೋಜಿತ ಬೀಟ್ ಸಿಬ್ಬಂದಿ ನಿರಂತರವಾಗಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಗ್ರಾಮಸ್ಥರ ಅಹವಾಲು ಆಲಿಸಲಿದ್ದಾರೆ. ಗ್ರಾಮದಲ್ಲಿ ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಕಠಿಣ ಕ್ರಮ: ಯಾವುದೇ ಸಮಾಜ ಘಾತುಕ, ಅಕ್ರಮ ಚಟುವಟಿಕಯಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ERSS – 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ಸಹಾಯ ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ, ಯಡೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಶಾಲಾ ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಜನ ಸ್ನೇಹಿ ಕಾರ್ಯಕ್ರಮಗಳ ಜಾರಿ
*** ಯುವ ಐಪಿಎಸ್ ಅಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಶಿವಮೊಗ್ಗ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಹಲವು ಜನ ಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದಾರೆ. ಠಾಣೆಗಳಿಗೆ ಸೀಮೀತವಾಗಿದ್ದ ಬ್ರೀಫಿಂಗ್ ಸಭೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ವ್ಯವಸ್ಥೆ ಮಾಡಿದ್ದಾರೆ. ಠಾಣೆಗಳಲ್ಲಿ ನೊಂದವರ ಸಭೆ ಆಯೋಜಿಸಿ, ದೂರುದಾರರ ಅಹವಾಲು ತೋಡಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ.

ರೌಡಿಸಂ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ಕಡಿವಾಣಕ್ಕೆ ಕ್ರಮಕೈಗೊಂಡಿದ್ದಾರೆ. ಪ್ರತ್ಯೇಕ ರೌಡಿ ನಿಗ್ರಹ ದಳ ಅಸ್ತಿತ್ವಕ್ಕೆ ತಂದಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಕಾನೂನು ಅರಿವು ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು ಮತ್ತಷ್ಟು ‘ಜನ ಸ್ನೇಹಿ’ಯಾಗಿ ರೂಪಿಸುವ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮ ಅನುಷ್ಠಾನಗೊಳಿಸಿ ಜಿ.ಕೆ.ಮಿಥುನ್ ಕುಮಾರ್ ಗಮನ ಸೆಳೆದಿದ್ದಾರೆ.