
5 ಗ್ಯಾರಂಟಿಗಳ ಘೋಷಣೆ ಜಾರಿ ಮಾಡಿದ ರಾಜ್ಯ ಸರ್ಕಾರ!
ಬೆಂಗಳೂರು, ಜೂ. 2: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ, ಪ್ರಸ್ತುತ ಹಣಕಾಸು ವರ್ಷದಲ್ಲಿಯೇ 5 ಗ್ಯಾರಂಟಿಗಳ ಜಾರಿಗೆ ರಾಜ್ಯ ಸರ್ಕಾರ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಚಿವ ಸಂಪುಟ ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ, ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತಂತೆ ಮಾಹಿತಿ ನೀಡಿದ್ದಾರೆ. ‘ಚುನಾವಣೆ ವೇಳೆ ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರ ನಡೆದುಕೊಂಡಿದೆ’ ಎಂದು ಸಿಎಂ ತಿಳಿಸಿದ್ದಾರೆ. ಗ್ಯಾರಂಟಿಗಳ ವಿವರ ಈ ಮುಂದಿನಂತಿದೆ.
ಗೃಹಜ್ಯೋತಿ
ಗೃಹ ಜ್ಯೋತಿ ಯೋಜನೆ ಜುಲೈ 1 ರಿಂದ ಜಾರಿಯಾಗಲಿದೆ. ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಗೆ, ಅದರ ಶೇಕಡ 10 ರಷ್ಟು ಸೇರ್ಪಡೆಗೊಳಿಸಿ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ.

ಇದು ಎಲ್ಲ ವರ್ಗದ ಮನೆಗಳಿಗೂ ಅನ್ವಯವಾಗಲಿದೆ. ಈ ಹಿಂದಿನ ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರು ಪಾವತಿಸಬೇಕು.ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ ನಿಂದ ಅನ್ವಯವಾಗಲಿದೆ.ಬಾಡಿಗೆದಾರರಿಗೂ ಈ ಯೋಜನೆ ಅನ್ವಯವಾಗಲಿದೆ.
ಗೃಹ ಲಕ್ಷ್ಮಿ ಗ್ಯಾರಂಟಿ
ಗೃಹ ಲಕ್ಷ್ಮೀ ಯೋಜನೆಯು ಆಗಸ್ಟ್ 15 ರಿಂದ ಜಾರಿಯಾಗಲಿದೆ. ಅರ್ಹ ಫಲಾನುಭವಿಯಾಗಲು ಮನೆಯ ಯಜಮಾನಿಯರು ಜೂನ್ 15 ರಿಂದ ಜುಲೈ 15 ರೊಳಗೆ ಅರ್ಜಿ ಸಲ್ಲಿಸಬೇಕು.

ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮೊದಲಾದ ವಿವರಗಳನ್ನು ನೀಡಬೇಕಿದೆ. ಮನೆಯ ಯಜಮಾನಿ ಖಾತೆಗೆ ನೇರ 2000 ರೂ. ಜಮಾವಣೆಯಾಗಲಿದೆ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು, ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರೂ ಕೂಡ ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.
ಶಕ್ತಿ ಗ್ಯಾರಂಟಿ
ಸರ್ಕಾರಿ ಬಸ್ ಗಳಲ್ಲಿ ಉಚಿತ ಬಸ್ ಪ್ರಯಾಣದ ಶಕ್ತಿ ಗ್ಯಾರಂಟಿಯು, ಜೂನ್ 11 ರಿಂದ ಜಾರಿಯಾಗಲಿದೆ. ಎಸಿ ಹಾಗೂ ಸ್ಲೀಪರ್ ಬಸ್ ಗಳನ್ನು ಹೊರತುಪಡಿಸಿ,

ಉಳಿದ ಸರ್ಕಾರಿ ಬಸ್ ಗಳಲ್ಲಿ ಎಲ್ಲ ವರ್ಗದ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ರಾಜ್ಯದೊಳಗೆ ಉಚಿತ ಪ್ರಯಾಣ ಮಾಡಬಹುದು. ಆದರೆ ಹೊರ ರಾಜ್ಯಗಳಿಗೆ ಉಚಿತ ಪ್ರಯಾಣ ಅನ್ವಯವಾಗುವುದಿಲ್ಲ.
ಅನ್ನ ಭಾಗ್ಯ
10 ಕೆ.ಜಿ. ಉಚಿತ ಅಕ್ಕಿ ವಿತರಣೆ ಮಾಡಲಾಗುವ ಅನ್ನ ಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಗೊಳ್ಳಲಿದೆ.

ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ಮಾಸಿಕ 10 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತದೆ.
ಯುವ ನಿಧಿ
2022-23 ರ ಶೈಕ್ಷಣಿಕ ವರ್ಷದಲ್ಲಿ ಎಲ್ಲ ವೃತ್ತಿಪರ ಕೋರ್ಸ್ ಹಾಗೂ ಪದವಿಗಳಲ್ಲಿ ತೇರ್ಗಡೆ ಹೊಂದಿದವರಿಗೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಕ್ರಮಕೈಗೊಂಡಿದೆ.

6 ತಿಂಗಳ ಗ್ರೇಸ್ ಪಿರಿಯಡ್ ಇರುತ್ತದೆ. ಆರು ತಿಂಗಳ ನಂತರವೂ ಕೆಲಸ ಸಿಗದಿದ್ದರೆ, 24 ತಿಂಗಳುಗಳ ಕಾಲ ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುತ್ತದೆ. 6 ತಿಂಗಳ ಒಳಗೆ ಖಾಸಗಿ/ಸರ್ಕಾರಿ ಕೆಲಸ ದೊರೆತರೆ ಅಥವಾ ಅರ್ಜಿ ಸಲ್ಲಿಸಿದ ನಂತರ ಕೆಲಸ ಸಿಕ್ಕಿದವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.